ಮುಂಬೈ: ತರಬೇತಿ ಪಡೆಯುತ್ತಿದ್ದ ಗಗನಸಖಿ (25ವರ್ಷ) ಶವವಾಗಿ ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್ ಗಢ ಮೂಲದ ರೂಪಾ ಓಗ್ರೆ ಎಂಬಾಕೆಯನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ ಏರ್ ಇಂಡಿಯಾದಿಂದ ಗಗನಸಖಿ ತರಬೇತಿಗಾಗಿ ಆಯ್ಕೆಯಾದ ನಂತರ ಮುಂಬೈಗೆ ಸ್ಥಳಾಂತರಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Vijayapur;ನನಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಎಂ.ಬಿ.ಪಾಟೀಲ ಬಿಜೆಪಿ ವಕ್ತಾರರೇ?:ಜಿಗಜಿಣಗಿ
ರೂಪಾ ಅಂಧೇರಿಯಲ್ಲಿರುವ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಅಕ್ಕ ಹಾಗೂ ಆಕೆಯ ಬಾಯ್ ಫ್ರೆಂಡ್ ಜತೆ ವಾಸವಾಗಿದ್ದಳು. ಕೆಲವು ದಿನಗಳ ಹಿಂದಷ್ಟೇ ಅಕ್ಕ ಮತ್ತು ಆಕೆಯ ಬಾಯ್ ಫ್ರೆಂಡ್ ಊರಿಗೆ ತೆರಳಿದ್ದರು.
ರೂಪಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಕೆಲಸ(ಕಸಗುಡಿಸುವ)ಗಾರ ವಿಕ್ರಮ್ ಅಟ್ವಾಲ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೌಸಿಂಗ್ ಸೊಸೈಟಿಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ 12 ತಂಡಗಳನ್ನು ರಚಿಸಲಾಗಿದೆ. ಹೌಸಿಂಗ್ ಸೊಸೈಟಿಯಲ್ಲಿ ಹೌಸ್ ಕೀಪರ್ ಆಗಿರುವ ವಿಕ್ರಮ್ ಪತ್ನಿಯನ್ನು ಕೂಡಾ ವಿಚಾರಣೆ ಒಳಪಡಿಸಲಾಗಿದೆ ಎಂದು ವರದಿ ವಿವರಿಸಿದೆ.
ಭಾನುವಾರ ಹೌಸಿಂಗ್ ಸೊಸೈಟಿಯ ಫ್ಲ್ಯಾಟ್ ನಲ್ಲಿದ್ದ ರೂಪಾ ಮೊಬೈಲ್ ಕರೆಯನ್ನು ಸ್ವೀಕರಿಸದಿದ್ದಾಗ, ಪೋಷಕರು ರೂಪಾಳ ಗೆಳೆಯರಿಗೆ ಕರೆ ಮಾಡಿ ಪರಿಶೀಲಿಸುವಂತೆ ವಿನಂತಿಸಿಕೊಂಡಿದ್ದರು. ಅದರಂತೆ ಆಕೆಯ ಗೆಳೆಯರು ಹೌಸಿಂಗ್ ಸೊಸೈಟಿಗೆ ಬಂದಾಗ ಆಕೆಯ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಬಳಿಕ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಪೊಲೀಸರು ಹೌಸಿಂಗ್ ಸೊಸೈಟಿಗೆ ಆಗಮಿಸಿ ಬಾಗಿಲು ಒಡೆದು ಒಳ ಹೋದಾಗ, ರೂಪಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.