Advertisement

ಔಷಧ ಕಳುಹಿಸಲಿಕ್ಕೂ ಬೆಂಗಳೂರಿಗೆ ಹೋಗಬೇಕು !

01:19 AM May 05, 2021 | Team Udayavani |

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ದೇಶೀಯ ಸರಕು ಸಾಗಣೆ ಸೇವೆ  ( ಏರ್‌ ಕಾರ್ಗೊ) ವ್ಯವಸ್ಥೆ ಹಲವು ದಿನಗಳಿಂದ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದು,  ಕರಾವಳಿಯ ವ್ಯಾಪಾರ ವಹಿವಾಟಿನ ಜತೆಗೆ ತುರ್ತು ಸಂದರ್ಭದಲ್ಲಿ ಔಷಧಗಳನ್ನೂ ಕಳುಹಿಸಲೂ ಸಂಕಷ್ಟ ಎದುರಾಗಿದೆ.

Advertisement

ಲಭ್ಯ ಮಾಹಿತಿ ಪ್ರಕಾರ ಕೆಲವೇ ದಿನಗಳ ಹಿಂದೆ ಮುಂಬಯಿಯಲ್ಲಿ ಆಕ್ಸಿಜನ್‌ ಸಮಸ್ಯೆ ಉಲ್ಬಣಿಸಿದ  ಕಾರಣ ಮಂಗಳೂರಿನ ಖಾಸಗಿ ಸಂಸ್ಥೆಯು ಆಕ್ಸಿಜನ್‌ ತುಂಬಿಸುವ ವಾಲ್ವ್ಅ ನ್ನು ತುರ್ತಾಗಿ ಕಳುಹಿಸಬೇಕಿತ್ತು. ಅದಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದರೆ ಕಾರ್ಗೊ ವ್ಯವಸ್ಥೆ ಇಲ್ಲ ಎಂಬ ಉತ್ತರ ದೊರೆಯಿತು. ಬಳಿಕ ಲಾರಿಯಲ್ಲಿ ಬೆಂಗಳೂರಿಗೆ ಕೊಂಡೊಯ್ದು ಅಲ್ಲಿಂದ ಮುಂಬಯಿಗೆ ಕಳುಹಿ ಸಲಾಯಿತು. ಇದೇ ರೀತಿ ರೆಮಿಡಿಸಿವರ್‌ನಂಥ ಔಷಧಗಳನ್ನು ಸಾಗಿಸುವಾಗಲೂ ಇದೇ ಸರಕು ಸೇವೆ ಇಲ್ಲ ಎಂಬ ಉತ್ತರ ದೊರೆತಿದೆ.

ಪ್ರಸ್ತುತ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಯನ್ನು ಅದಾನಿ ಸಂಸ್ಥೆ ನಿರ್ವಹಿಸುತ್ತಿದೆ. ಆದರೆ ಈ ಸಮಸ್ಯೆ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದತ್ತ ಬೆರಳು ತೋರಿಸುತ್ತಿದೆ. ಪ್ರಾಧಿಕಾರ ದವರು ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ವಾಸ್ತವವಾಗಿ ತಾಂತ್ರಿಕ ಕಾರಣದ ನಿವಾರಣೆಯ ವಿಳಂಬದಿಂದ ಕರಾವಳಿಗರಿಗೆ ತೊಂದರೆಯಾಗುತ್ತಿದೆ.

ಈಗ ಯಾಕೆ ಸಮಸ್ಯೆ? :

ದೇಶೀಯವಾಗಿ ಏರ್‌ ಕಾರ್ಗೊ ವ್ಯವಸ್ಥೆಯಡಿ ಕಳುಹಿಸುವ ಎಲ್ಲ ವಸ್ತುಗಳನ್ನೂ  ಮೊದಲು ವಿಮಾನ ನಿಲ್ದಾಣದಲ್ಲಿನ ಸ್ಕ್ಯಾನರ್‌ ನಲ್ಲಿ ಪರಿಶೀಲಿಸಬೇಕು. ಸ್ಕ್ಯಾನರ್‌ ಅನ್ನು ವರ್ಷಕ್ಕೊಮ್ಮೆ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಪರಿಶೀಲಿಸಿ ಒಪ್ಪಿಗೆ ನೀಡಬೇಕು. ಈಗಾಗಲೇ ಅಧಿಕಾರಿಗಳ ತಂಡ ಪರಿಶೀಲಿಸಿದ್ದರೂ ಒಪ್ಪಿಗೆ ಪತ್ರ ನೀಡಿಲ್ಲ. ಜತೆಗೆ ಈ ಹಿಂದೆ ಕಾರ್ಗೊ ಗುತ್ತಿಗೆ ನಿರ್ವಹಿಸುತ್ತಿದ್ದ ಸಂಸ್ಥೆಯ ಗುತ್ತಿಗೆ ನವೀಕರಣವೂ ಆಗಿಲ್ಲ ಎನ್ನುತ್ತವೆ ಸುದ್ದಿ ಮೂಲಗಳು.

Advertisement

ಮಂಗಳೂರಿನಿಂದ ನಿತ್ಯವೂ ಬೆಂಗಳೂರು, ಮುಂಬಯಿ, ಹೈದರಾಬಾದ್‌, ಚೆನ್ನೈಗಳಿಗೆ  ವಿಮಾನ ಸೇವೆ ಇದ್ದು, ಕಾರ್ಗೊ ಸೇವೆಯೂ ಚಾಲ್ತಿಯಲ್ಲಿತ್ತು.  ಅಂಚೆ ಪತ್ರಗಳು, ತರಕಾರಿ, ಹಣ್ಣು ಹಂಪಲು, ಮೀನು, ಕೊರಿಯರ್‌, ಯಂತ್ರಗಳೂ ಸೇರಿದಂತೆ ಹಲವು ಸರಕುಗಳನ್ನು ಸಾಗಿಸಲಾಗುತ್ತಿತ್ತು. ಅದಕ್ಕೀಗ  ತಡೆ ಬಿದ್ದಿದೆ.

ಬರಬಹುದು; ಹೋಗುವಂತಿಲ್ಲ! :

ಹಳೆ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಭಾಗಕ್ಕೆ ಏರ್‌ ಕಾರ್ಗೊ ವ್ಯವಸ್ಥೆ ಚಾಲ್ತಿಯಲ್ಲಿದೆ.  ಇದಕ್ಕೆ ಪ್ರತ್ಯೇಕ ಸ್ಕ್ಯಾನರ್‌ ಇದ್ದು, ಕಾರ್ಯ ನಿರ್ವಹಿ ಸುತ್ತಿರುವುದರಿಂದ ಮಂಗಳೂರಿನಿಂದ ವಿದೇಶಕ್ಕೆ ಹಾಗೂ ಬೇರೆ ಭಾಗಗಳಿಂದ ಮಂಗಳೂರಿಗೆ ಯಾವುದೇ ಸರಕು ಸಾಗಣೆಗೆ ಸಮಸ್ಯೆ ಇಲ್ಲ.

ಅಂಚೆ ಪತ್ರ ಕಳುಹಿಸಲೂ ಸಮಸ್ಯೆ :

ಕರಾವಳಿಯಿಂದ ಬೇರೆ ಭಾಗಗಳಿಗೆ ಅಂಚೆ ಪತ್ರಗಳು ವಿಮಾನ ನಿಲ್ದಾಣದಿಂದ ಕಾರ್ಗೊ ಮೂಲಕ ತೆರಳುತ್ತಿದ್ದವು. ಆದರೆ ಈಗ ಕಾಗದ ಪತ್ರಗಳನ್ನೂ ವಾಹನಗಳ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿ ಅಲ್ಲಿಂದ ಇತರ ಭಾಗಗಳಿಗೆ ಕಳುಹಿಸಲಾಗುತ್ತಿದೆ.

ಸೂಕ್ತ ಕ್ರಮಕ್ಕೆ ಸೂಚನೆ :

ಮಂಗಳೂರು ವಿಮಾನ ನಿಲ್ದಾಣದಿಂದ ದೇಶೀಯ ಕಾರ್ಗೊ ಸೇವೆ ಸ್ಥಗಿತವಾಗಿರುವ ಬಗ್ಗೆ ನಿಲ್ದಾಣದ ಅಧಿಕಾರಿ ಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮಕ್ಕೆ ಆದೇಶಿಸುವೆ.  ನಳಿನ್‌ ಕುಮಾರ್‌ ಕಟೀಲು,  ದ.ಕ. ಸಂಸದ

 

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next