ಪೆರ್ಲ: ಜಲ ಸಂಪನ್ಮೂಲಗಳು ಸಮೃದ್ಧಿಯಿಂದ ಇದ್ದರೆ ನಾಡು,ಕೃಷಿ,ಜೀವ ಜಾಲಗಳು ಸಂತೃಪ್ತವಾಗಿ ಇರುವುದು.ಗಾಳಿ ಮತ್ತು ನೀರು ಜೀವರಕ್ಷಗಳು ಎಂದು ಪರಿಸರ ಪ್ರೇಮಿ, ಜಲ ತಜ್ಞ ಶ್ರೀಪಡ್ರೆ ಅವರು ಹೇಳಿದರು.
ಅವರು ಸ್ವರ್ಗದಲ್ಲಿ ಜೂ.16ರಂದು ನಡೆದ ಜಲ ಕಾರ್ಯಕರ್ತರ ಮಾಹಿತಿ ಶಿಬಿರ ನಮ್ಮ ನಡಿಗೆ ತೋಡಿನೆಡೆಗೆ,ನೀರ ನೆಮ್ಮದಿಯತ್ತ ಪಡ್ರೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಹಳ್ಳಿ ಪ್ರದೇಶದ ಹೆಚ್ಚಿನ ಜನರು ಕೃಷಿ,ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು.ಇವೆರಡು ವ್ಯವಸಾಯಕ್ಕೆ ನೀರು ಪ್ರಧಾನ.ಈ ಮೊದಲು ಎಲ್ಲಾ ಋತುಗಳಲ್ಲೂ ಧಾರಾಳ ನೀರು ಲಭ್ಯವಾಗುತ್ತಿದ್ದ ಪ್ರದೇಶಗಳಲ್ಲಿ ಕೂಡ ನೀರಿನ ಬರ ತಲೆದೋರಿದೆ. ಇದಕ್ಕೆ ಪ್ರಧಾನ ಕಾರಣ ನೀರಿನ ಅತೀ ಬಳಕೆ.ಆದರೆ ನೀರನ್ನು ಇಂಗಿಸುವ ಕಾರ್ಯ ಇಲ್ಲದಿರುವುದು ನೀರಿನ ಕ್ಷಾಮಕ್ಕೆ ಪ್ರಮುಖ ಕಾರಣ.ಮಳೆ ನೀರು ಇಂಗದೆ ಸರಾಗ ಹರಿಯುವ ಕಾರಣ ಮಣ್ಣಿನ ಸತ್ವ ,ಸಾವಯವ ನಾಶ,ನೀರನ್ನು ಇಂಗಿಸುವ ಗುಣ ಕಳೆದುಕೊಳ್ಳುತ್ತಿದೆ.ಕಾಸರಗೋಡಿನಲ್ಲಿ ಸಾಮಾನ್ಯ ಒಂದು ಚ.ಮೀ.ವಿಸ್ತೀರ್ಣದ ಪ್ರದೇಶದಲ್ಲಿ 3,500 ಲೀ.ಮಳೆ ಸುರಿಯುತ್ತಿದೆ.10 ಸೆಂಟ್ಸ್ ಸ್ಥಳದಲ್ಲಿ 14ಲಕ್ಷ ಲೀ.ಮಳೆಯಾಗುತ್ತಿದೆ.ಸಣ್ಣ ಕುಟುಂಬದ ಒಂದು ವರ್ಷದ ಗೃಹ ಬಳಕೆಗೆ 2.5ಲಕ್ಷ ಲೀ.ನೀರು ಸಾಕಾಗುತ್ತದೆ ಎಂದು ಅಂಕಿ ಅಂಶದೊಂದಿಗೆ ತಿಳಿಸಿದರು.
ಭೂಮಿಗೆ ಬೀಳುವ ನೀರನ್ನು ಸಮರ್ಥವಾಗಿ ಹಿಡಿದಿರಿಸುವ ಪ್ರಯತ್ನ ಮಾಡಿದ್ದಲ್ಲಿ ನೀರಿನ ಕ್ಷಾಮ ಎದುರಾಗದು ಎಂದು ನುಡಿದರು.
ಜೂ.23: ಮಾಹಿತಿ ಕಾರ್ಯಾಗಾರ
ಶಿಬಿರದಲ್ಲಿ ಸ್ಲೆಡ್ ಶೋ,ಪ್ರಶ್ನೋತ್ತರ ಸಂವಾದಗಳು ನಡೆದವು.ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್.ಕೆವೈ,ಶ್ರೀಧರ ಭಟ್,ಜಗದೀಶ್ ಕುತ್ತಾಜೆ,ಶ್ರೀನಿವಾಸ ಸ್ವರ್ಗ ಸಂವಾದದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡರು. ಜೂ.23ರಂದು ಜಲಮೂಲಗಳ ನೀರಿನ ಮಟ್ಟ ಹೆಚ್ಚಿಸಲು ಸ್ಥಳ ಪರಿಶೀಲನೆ,ನೀರಿಂಗಿಸುವ ಸಾಧ್ಯತೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.