Advertisement

2.60 ಲಕ್ಷ ಜನರಿಗೆ ಡಿಇಸಿ ಮಾತ್ರೆ ನೀಡುವ ಗುರಿ

11:08 AM Sep 21, 2018 | Team Udayavani |

ಕಲಬುರಗಿ: ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಎರಡು ವರ್ಷದೊಳಗಿನ ಕಿರಿಯ ಮಕ್ಕಳು ಮತ್ತು 65 ವರ್ಷಕ್ಕಿಂತ
ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಹಾಗೂ ಇನ್ನಿತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವರನ್ನು ಹೊರತುಪಡಿಸಿ
2.60ಲಕ್ಷ ಅರ್ಹ ವ್ಯಕ್ತಿಗಳಿಗೆ ಡಿಇಸಿ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಕೆ. ಪಾಟೀಲ ತಿಳಿಸಿದರು.

Advertisement

ಜಿಲ್ಲಾ ಸರ್ವೇಕ್ಷಣಾ ಕೇಂದ್ರದಲ್ಲಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮದ ಸಿದ್ಧತೆ ಕುರಿತು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 24 ರಿಂದ ಡಿ. 6ರ ವರೆಗೆ ಜಿಲ್ಲೆಯಾದ್ಯಂತ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆನೆಕಾಲು ರೋಗ ತಗುಲದಂತೆ ಮುಂಜಾಗೃತಾ ಕ್ರಮವಾಗಿ ಮಾತ್ರೆ ನುಂಗಬೇಕು. ಆನೆಕಾಲು ರೋಗ ತಗುಲಿದರೆ ಅದನ್ನು ನಿವಾರಿಸಲು ಸೂಕ್ತ ಚಿಕಿತ್ಸೆ ಇಲ್ಲ ಎಂದರು.

ಜಿಲ್ಲೆಯ ಎಲ್ಲ ತಾಲೂಕಿನ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ 50 ಮನೆಗೆ ಒಬ್ಬರಂತೆ ಒಟ್ಟು 2832 ಆಶಾ ಹಾಗೂ
ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಇವರು ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನುಂಗಿಸುವರು. ಪ್ರತಿ 10 ಜನೌಷಧ ವಿತರಕರಿಗೆ ಒಬ್ಬರಂತೆ ಒಟ್ಟು 283 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೆ. 24 ರಿಂದ ನಾಲ್ಕು ದಿನಗಳ ಕಾಲ ಮನೆ ಮನೆಗೆ ತೆರಳಿ ಮಾತ್ರೆ
ನುಂಗಿಸುವರು. ಈ ಅವಧಿಯಲ್ಲಿ ಮಾತ್ರೆ ನುಂಗದವರಿಗೆ ಅ. 6 ರೊಳಗಾಗಿ ಮನೆಗೆ ಭೇಟಿ ನೀಡಿ ಮಾತ್ರೆ ನುಂಗಿಸಲಾಗುವುದು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡಿ.ಇ.ಸಿ. ಮಾತ್ರೆಗಳನ್ನು ನುಂಗಿಸಲಾಗುವುದು ಎಂದರು.
 
ಜಿಲ್ಲೆಯಲ್ಲಿ ಈವರೆಗೆ ಒಟ್ಟು 7500 ಆನೇಕಾಲು ರೋಗಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆನೆಕಾಲು ರೋಗ ಪ್ರಕರಣಗಳು ಸೇಡಂ, ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ ಎಂದರು.

ಪೈಲೇರಿಯಾ ನಿಯಂತ್ರಣಾಧಿಕಾರಿ ಡಾ| ಬಸವರಾಜ ಗುಳಗಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ| ಶರಣಬಸಪ್ಪ ಕ್ಯಾತನಾಳ, ತಾಲೂಕು ವೈದ್ಯಾಧಿಕಾರಿ ರಾಜಕುಮಾರ ಕುಲಕರ್ಣಿ, ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next