ಬಳ್ಳಾರಿ: ಕೇವಲ ಮನುಷ್ಯರಿಗೆ ಮಾತ್ರ ವೈಯಕ್ತಿಕ ಶೌಚಾಲಯ ನಿರ್ಮಿಸಿದರೆ ಸಾಲದು. ನಮ್ಮೊಂದಿಗೆ ಜೀವಿಸುವ ದನ, ಕುರಿ, ಕೋಳಿಗಳಿಗೂ ಪ್ರತ್ಯೇಕ ದನದ ಕೊಟ್ಟಿಗೆ, ಕುರಿದೊಡ್ಡಿ, ಕೋಳಿ ಶೆಡ್ಡುಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 5 ಸಾವಿರ ದನದ ಕೊಟ್ಟಿಗೆಗಳನ್ನು ನಿರ್ಮಿಸಿದರೆ, ಶೇ.100 ರಷ್ಟು ಗುರಿಸಾಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಮುಂದಿನ ಗಣರಾಜ್ಯೋತ್ಸವ (ಜ.26) ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನಿಸುವುದಾಗಿ ಎಂದು ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಪಶುಸಂಗೋಪನಾ ಇಲಾಖೆಯಿಂದ ನರೇಗಾ ಯೋಜನೆಯಡಿ ದನದಕೊಟ್ಟಿಗೆ ನಿರ್ಮಿಸುವ ಕುರಿತು ಗ್ರಾಪಂ ಪಿಡಿಒ, ತಾಂತ್ರಿಕ ಸಹಾಯಕರು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಡೆದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನುವಾರುಗಳಿಗೂ ನಮ್ಮೊಂದಿಗೆ ಬದುಕುವ ಹಕ್ಕಿದೆ. ಮನುಷ್ಯರಿಗೆ ವಸತಿ ಯೋಜನೆಯಂತೆ ಜಾನುವಾರುಗಳಿಗೆ ವಸತಿ (ದನದ ಕೊಟ್ಟಿಗೆ) ಸೌಲಭ್ಯ ಕಲ್ಪಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಶಾಲೆಯ ಕಾಂಪೌಂಡ್, ಗೇಟ್, ತರಗತಿ ಕೊಠಡಿಗಳ ಕಿಟಕಿ ಸೇರಿದಂತೆ
ಬೇಕಾದ ಕಡೆ ಕಟ್ಟಿರುತ್ತಾರೆ. ಇದನ್ನು ಹಲವೆಡೆ ಕಂಡಿದ್ದ ಹಿನ್ನೆಲೆಯಲ್ಲಿ ನರೇಗ ಯೋಜನೆಯಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಅನುದಾನ ರಹಿತವಾಗಿ ಈ ಯೋಜನೆಯನ್ನು ಯಶಸ್ವಿಗೊಳಿಸುವುದು ಒಂದು ಚಾಲೆಂಜ್ ಆಗಿದ್ದು, ಗ್ರಾಪಂ ಪಿಡಿಒ, ಅಧ್ಯಕ್ಷರು, ತಾಂತ್ರಿಕ ಸಹಾಯಕರು ಸೇರಿದಂತೆ ಯೋಜನೆಯನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಕೋರಿದರು.
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರದಿಂದ ದೊರೆಯುತ್ತಿದ್ದ ಅನುದಾನ ದನದ ಕೊಟ್ಟಿಗೆ, ಕುರಿದೊಡ್ಡಿ, ಕೋಳಿ ಶೆಡ್ಡುಗಳ ನಿರ್ಮಾಣಕ್ಕೆ ಸಿಗಲ್ಲ. ಜಿಲ್ಲೆಯಲ್ಲಿ ಡಿಎಂಎಫ್ ಸೇರಿದಂತೆ ಸಾಕಷ್ಟು ಸಂಪನ್ಮೂಲಗಳಿವೆ. ಮೇಲಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ದನ, ಕುರಿಗಳಿಗೆ ಶೆಡ್ಡುಗಳನ್ನು ನಿರ್ಮಿಸಲು ಅನುದಾನವಿದೆ. ಇಲಾಖೆಯು ಸೂಚಿಸುವ 7.7×3.5 ಮೀಟರ್ ಅಳತೆಯ ನಿವೇಶನದಲ್ಲಿ ನಿರ್ಮಿಸಿಕೊಂಡರೆ ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ 43 ಸಾವಿರ ರೂ., ಇತರೆ ಸಾಮಾನ್ಯ ವರ್ಗಕ್ಕೆ 19625 ರೂ. ಅನುದಾನ ನೀಡಲಾಗುತ್ತದೆ.
ನಿರ್ಮಾಣಕ್ಕೆ ತಕ್ಕಷ್ಟು ಅನುದಾನ ಬಿಡುಗಡೆಗೊಳಿಸಲಾಗುತ್ತದೆ. ಅಲ್ಲದೇ, ಒಂದು ವೇಳೆ ಹಣ ಕೈ ಸೇರುವವರೆಗೆ ಶೆಡ್ ನಿರ್ಮಿಸಿಕೊಂಡು ಬಳಿಕ ಕಿತ್ತಿದರೆ ಅಪರಾಧ ವಾಗಲಿದೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ಧಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮುದಾಯ ಶೆಡ್ ನಿರ್ಮಿಸಿ: ಜಿಲ್ಲೆಯಲ್ಲಿನ ಗೋಮಾಳ ಭೂಮಿಯನ್ನು ಪತ್ತೆ ಹಚ್ಚುವ ಜವಾಬ್ದಾರಿ ಪಶು ವೈದ್ಯಕೀಯ ಸೇವಾ ಇಲಾಖೆ ಮೇಲಿದೆ. ಕೂಡಲೇ ಗೋಮಾಳ ಭೂಮಿ ಪತ್ತೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ| ಶಶಿಧರ ಅವರಿಗೆ ಸೂಚಿಸಿದ ಸಿಇಒ ಕೆ.ವಿ.ರಾಜೇಂದ್ರ ಅವರು, ಗ್ರಾಮಗಳಲ್ಲಿ ಸ್ವಂತ ನಿವೇಶನವಿಲ್ಲದ ರೈತರ ಅನುಕೂಲಕ್ಕಾಗಿ ಗೋಮಾಳ ಭೂಮಿಯನ್ನು ಪತ್ತೆ ಹಚ್ಚಿ ಸಮುದಾಯ ದನದಕೊಟ್ಟಿಗೆಗಳನ್ನು ನಿರ್ಮಿಸುವಂತೆ ಸೂಚಿಸಿದರು. ಇದಕ್ಕಾಗಿ 1.70 ಸಾವಿರ ರೂ. ಅನುದಾನ ನೀಡಲಾಗುತ್ತದೆ. ಇದರಿಂದ ದನದ ಕೊಟ್ಟಿಗೆ ಇಲ್ಲದ ರೈತರು ತಮ್ಮ ಜಾನುವಾರುಗಳನ್ನು ಸಮುದಾಯ ಕೊಟ್ಟಿಗೆಯಲ್ಲಿ ಪಾಲನೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಳಿಕ ಗ್ರಾಮೀಣ ಭಾಗದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿಗದಿತ ಅನುದಾನದಲ್ಲಿ ದನದಕೊಟ್ಟಿಗೆಗಳನ್ನು ಹೇಗೆ? ಎಷ್ಟು ಎತ್ತರದಲ್ಲಿ? ಯಾವ ಮಾದರಿಯಲ್ಲಿ ನಿರ್ಮಿಸಬೇಕು? ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಬಳಿಕ ನರೇಗ ಯೋಜನೆಗಳ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು. ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಶಶಿಧರ, ತಾಪಂ ಇಒ ಜಾನಕಿರಾಮ, ಬಸವರಾಜ್ ಇತರರಿದ್ದರು.