ಅಹಮದಾಬಾದ್: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗುಜರಾತ್‌ನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಡ್ಯಾನಿಶ್ ಖುರೇಷಿ ಅವರನ್ನು ಅಹಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಬಂಧಿಸಿದೆ.
ಶಿವಲಿಂಗ ಕುರಿತಾಗಿ ಮೇಲೆ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಖುರೇಷಿ ವಿರುದ್ಧ ವಿಶ್ವ ಹಿಂದೂ ಪರಿಷತ್ ದೂರು ದಾಖಲಿಸಿದೆ.
ವಾರಾಣಸಿ ವಿಶ್ವನಾಥ ದೇವಾಲಯದ ಬಳಿಯಿರುವ ಮಸೀದಿಯಲ್ಲಿ ಮೂರು ದಿನ ನಡೆದ ಸರ್ವೇಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಸಂಸ್ಥೆಗಳ ಪರ ವಕೀಲರು ಹೇಳಿದ್ದರು. ಆದರೆ ಮಸೀದಿಯ ಆಡಳಿತ ಮಂಡಳಿ ಇದನ್ನು ಅಲ್ಲಗಳೆದಿದ್ದು, ಇದು ಶಿವಲಿಂಗವಲ್ಲ. ಇದು ನೀರಿನ ಫೌಂಟನ್ ಎಂದಿದೆ.
ಇದನ್ನೂ ಓದಿ:ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
“ಖುರೇಷಿಗೆ ಸೇರಿದ ಟ್ವಿಟರ್ ಹ್ಯಾಂಡಲ್‌ನಿಂದ ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವುದು ಸೈಬರ್ ತಂಡದ ಗಮನಕ್ಕೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಾವು ಟ್ವಿಟರ್ ಹ್ಯಾಂಡಲ್‌ನ ತಾಂತ್ರಿಕ ವಿಶ್ಲೇಷಣೆ ನಡೆಸಿ ಖುರೇಷಿಯನ್ನು ಬಂಧಿಸಿದ್ದೇವೆ” ಎಂದು ಅಪರಾಧ ವಿಭಾಗ ಎಸಿಪಿ ಜೆಎಂ ಯಾದವ್ ಅವರು ಪಿಟಿಐ ವರದಿ ಮಾಡಿದ್ದಾರೆ.