ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಬೆಂಗಾವಲು ಪಡೆಯ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಘಟನೆ ಬೆನ್ನಲ್ಲೇ ಒವೈಸಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಎಎನ್ ಐ ವರದಿ ತಿಳಿಸಿದೆ.
ಇದನ್ನೂ ಓದಿ:ಹಿಜಾಬ್ ಪ್ರಕರಣ: ವಿದ್ಯಾರ್ಥಿನಿಯರ ಹಿಂದೆ ಪ್ರಚೋದಕ ಶಕ್ತಿಗಳಿವೆ ಎಂದ ರವಿ ಕುಮಾರ್
ವರದಿಯ ಪ್ರಕಾರ, ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಅಸಾದುದ್ದೀನ್ ಒವೈಸಿಯ ಭದ್ರತೆ ಕುರಿತು ಕೇಂದ್ರ ಸರ್ಕಾರ ಪುನರ್ ಪರಿಶೀಲನೆ ನಡೆಸಿದೆ. ಅಲ್ಲದೇ ತಕ್ಷಣವೇ ಜಾರಿಗೆ ಬರುವಂತೆ ಒವೈಸಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡಲು ನಿರ್ಧರಿಸಿದೆ ಎಂದು ಉನ್ನತ ವಿಶ್ವಾಸಾರ್ಹ ಮೂಲಗಳು ತಿಳಿಸಿರುವುದಾಗಿ ಹೇಳಿದೆ.
ಗುರುವಾರ (ಫೆ.03) ಉತ್ತರಪ್ರದೇಶದ ಮೀರತ್ ನಲ್ಲಿ ಅಸಾದುದ್ದೀನ್ ಒವೈಸಿ ಚುನಾವಣಾ ಪ್ರಚಾರ ನಡೆಸಲು ತೆರಳುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಬೆಂಗಾವಲು ಪಡೆಯ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬೆಂಗಾವಲು ಪಡೆ ಕಾರಿನ ಮೇಲೆ ನಡೆದ ಗುಂಡಿನ ದಾಳಿಯ ಕುರಿತು ಶುಕ್ರವಾರ ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಒವೈಸಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಉತ್ತರಪ್ರದೇಶದ ಹಾಪುರ್ ಜಿಲ್ಲೆಯಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಉತ್ತರಪ್ರದೇಶದಲ್ಲಿ ಫೆಬ್ರುವರಿ 10ರಿಂದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಪಂಚರಾಜ್ಯ ಚುನಾವಣೆಯ ಫಲಿತಾಂಶ ಘೋಷಣೆಯಾಗಲಿದೆ.