Advertisement

ನಾಯಕರಿಗೆ ಮತಬೇಟೆ ಗುರಿ

04:42 PM Oct 31, 2018 | Team Udayavani |

ಜಮಖಂಡಿ (ಬಾಗಲಕೋಟೆ): ರೈತರಿಗೆ ತಾವು ಬೆಳೆದ ಬೆಳೆ ಕೈಗೆ ಬರುತ್ತಿಲ್ಲ ಎಂಬ ಚಿಂತೆ. ರಾಜಕೀಯ ನಾಯಕರಿಗೆ ಉಪ ಚುನಾವಣೆಯಲ್ಲಿ ಮತ ಪಡೆದು ಗೆಲ್ಲಬೇಕೆಂಬ ಗುರಿ. ಇದು ಜಮಖಂಡಿ ಕ್ಷೇತ್ರದಲ್ಲಿ ಕಂಡು ಬರುವ ಚಿತ್ರಣ. ಕೃಷ್ಣಾ ನದಿ ಹಾಗೂ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ತಾಲೂಕಿನಲ್ಲಿ ಒಂದಷ್ಟು ಬೆಳೆ ಹಸಿರಾಗಿ ಕಾಣುತ್ತಿವೆ. ಕಬ್ಬು ಹೊರತುಪಡಿಸಿದರೆ ಉಳಿದ ಯಾವ ಬೆಳೆಯೂ ಕೈಗೆ ಬರುವ ಪರಿಸ್ಥಿತಿ ಇಲ್ಲ. ಈ ಭಾಗದ ಹೆಸರಾಂತ ಬಿಳಿಜೋಳವನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರಾದರೂ ಅದು ಬಾಟಿ (ತೆನೆ ಕಟ್ಟದ ದಂಡು) ಆಗಿ ನಿಲ್ಲುವ ಆತಂಕ ರೈತರಲ್ಲಿ ಕಾಡುತ್ತಿದೆ.

Advertisement

ಚುನಾವಣೆ ನಿಮಿತ್ತ ಆಯಾ ಗ್ರಾಮಕ್ಕೆ ಯಾರೇ ಪ್ರಚಾರಕ್ಕೆ ಬಂದರೂ ರೈತರು ಮಾತ್ರ ಕುತೂಹಲದಿಂದ ಭಾಗವಹಿಸುತ್ತಿಲ್ಲ. ಬದಲಾಗಿ ಈಗ ಬರತಾರ್‌, ಗೆದ್ದಮ್ಯಾಗ್‌ ನಮ್ಮೂರ ಕಡೆ ಯಾರೂ ತಲಿ ಹಾಕಲ್ಲ. ರಟ್ಟಿ ಗಟ್ಟಿ ಇದ್ರ ಹೊಟ್ಟಿಗಿ ಹಿಟ್ಟ, ಅವರ ಭರವಸೆ ಭಾಷಣಾ ತಗೊಂಡು ನಮಗೇನು ಆಗತೈತಿ ಎಂಬ ಬೇಸರ ರೈತರಿಂದ ಕೇಳಿ ಬರುತ್ತಿದೆ.

ಸಾವಳಗಿ ಭಾಗದಲ್ಲಿ ದಾಳಿಂಬೆ, ದ್ರಾಕ್ಷಿ, ಬಿಳಿಜೋಳ, ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಜಮಖಂಡಿ ಹೋಬಳಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಕಬ್ಬು ಬೆಳೆದಿದ್ದು, ಒಂದಷ್ಟು ತೊಗರಿ, ಮೆಕ್ಕೆಜೋಳ ಬೆಳೆ ಕೂಡ ಅಲ್ಲಲ್ಲಿ ಕಾಣುತ್ತವೆ. ಕಬ್ಬು, ಮೆಕ್ಕೆಜೋಳಕ್ಕೆ ನೀರು ಹಾಯಿಸಿದರೆ ಕೈಗೆ ಬರುತ್ತವೆ. ಆದರೆ, ತೊಗರಿ, ಬಿಳಿಜೋಳಕ್ಕೆ ಸ್ವಲ್ಪ ಪ್ರಮಾಣದ ಮಳೆ ಬೇಕೇಬೇಕು. ಹೀಗಾಗಿ ಬಿತ್ತಿದ ಬೆಳೆ ಕೈ ಸೇರುತ್ತಿಲ್ಲ. ಮಳೆಯೇ ಆಗಲಿಲ್ಲ ಎಂಬ ಹಳಹಳಿ (ಬೇಸರದ ಮಾತು) ಮಾಡುತ್ತ ಗುಂಪು ಗುಂಪಾಗಿ ರೈತ ವಲಯ ಕಾಣಿಸುತ್ತದೆ. ಐದು ತಿಂಗಳ ಹಿಂದಷ್ಟೇ ಮತದಾನ ಮಾಡಿದ್ದ ಈ ಕ್ಷೇತ್ರದ ಜನರು ಈಗ ಮತ್ತೆ ವಿಧಾನಸಭೆಗೆ ತಮ್ಮ ಕ್ಷೇತ್ರದ ಪ್ರತಿನಿಧಿ ಆಯ್ಕೆ ಮಾಡುವ ಅನಿವಾರ್ಯತೆ ಬಂದೊದಗಿದೆ. ಈಗ ನಮ್ಮ ಭಾಗದಲ್ಲಿ ಕಾಣುವ ಹಸಿರುವ ಬೆಳೆಗೆ ಸಿದ್ದು ನ್ಯಾಮಗೌಡರ ನೀರಾವರಿ ಕಾಳಜಿ ಕಾರಣ ಎಂದು ಕೆಲವರು  ರಿಸಿದರೆ, ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆ- ಸೇತುವೆ ಕಾಣಲು ಶ್ರೀಕಾಂತ ಕುಲಕರ್ಣಿ ಶ್ರಮ ಕಾರಣ ಎಂದು ಹೇಳುವ ಜನರೂ ಇದ್ದಾರೆ. ಆದರೆ, ಸಿದ್ದು ನ್ಯಾಮಗೌಡ್ರು ಹೋಗಿದ್ದ ದೊಡ್ಡ ಅನ್ಯಾಯ ಅನ್ನೋರು ಇಲ್ಲಿದ್ದಾರೆ.

ಕಾಂಗ್ರೆಸ್‌ಗೆ ಸಾವಳಗಿ ರೆಡ್‌ ಝೋನ್‌:
ಉಪಚುನಾವಣೆಯ ಪ್ರಚಾರಕ್ಕೆ ಬರುವ ಎರಡೂ ಪಕ್ಷಗಳ ನಾಯಕರು, ಸ್ಥಳೀಯ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು, ಆಯಾ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮೇಲೆ ಆರೋಪ-ಪ್ರತ್ಯಾರೋಪದಲ್ಲೇ ತೊಡಗಿದ್ದಾರೆ. ಈ ಕುರಿತು ಜನರು, ಏನ್ರಿ ಬರ್ತಾರ್‌, ಇವ್ರು ಬಗ್ಗೆ ಅವರು, ಅವ್ರ ಬಗ್ಗೆ ಇವರು ಬೈದು ಹೊಕ್ಕಾರ್‌. ಅದರಿಂದ ನಮಗೇನು ಬಂತು. ನಮ್ಮೂರಿಗೆ ಏನ್‌ ಮಾಡ್ತೀವಿ ಎಂದು ಯಾರೂ ಹೇಳಲ್ಲ ಎಂದು ಗದ್ಯಾಳದ ರೈತ ಶ್ರೀಮಂತ ರಾಮಪ್ಪ ಮಾಳಿ ಬೇಸರ ವ್ಯಕ್ತಪಡಿಸಿದರು. ಉಪ ಚುನಾವಣೆ ಪ್ರತಿಷ್ಠೆಯಾಗಿ ಪಡೆದಿರುವ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು, ಐದೈದು ನಾಯಕರ ತಂಡ ಮಾಡಿಕೊಂಡು ಪ್ರಚಾರ ನಡೆಸಿದ್ದಾರೆ. ಸಾವಳಗಿ ಹೋಬಳಿ ವ್ಯಾಪ್ತಿಯನ್ನು ಕಾಂಗ್ರೆಸ್‌, ಗಂಭೀರವಾಗಿ ಪರಿಗಣಿಸಿದೆ. ಕಳೆದ ಚುನಾವಣೆಯ ಬೂತ್‌ವಾರು ಮತದಾನದ ವಿವರ ಪಡೆದು, ಎಲ್ಲಿ ಎಷ್ಟು ಮತ ಕಾಂಗ್ರೆಸ್‌ಗೆ ಬಂದಿವೆ. ಕಡಿಮೆ ಮತ ಬರಲು ಕಾರಣ ಏನು? ಬಿಜೆಪಿಗೆ ಹೆಚ್ಚು ಮತ ಬಿದ್ದಿರುವ ಗ್ರಾಮಗಳಲ್ಲಿ ನಮ್ಮತ್ತ ಸೆಳೆಯುವುದು ಹೇಗೆ ಎಂದು ತಲೆಕೆಡಿಸಿಕೊಂಡಿದೆ.

ಕ್ಷೇತ್ರದ ಬಿದರಿ, ಚಿಕ್ಕಲಕಿ, ಗದ್ಯಾಳ ಮುಂತಾದ ಗ್ರಾಮಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಚಿಕ್ಕಲಕಿ ಗ್ರಾಮಕ್ಕೆ ಕಾಲಿಟ್ಟರೂ ಸಾಕು ಶಿವಾಜಿ ಮಹಾರಾಜರ ಭಕ್ತರ ದಂಡು ಕಾಣುತ್ತದೆ. ಗ್ರಾಮದ ತುಂಬ ಭಗವಾ ಧ್ವಜ ರಾರಾಜಿಸುತ್ತವೆ. ಇದನ್ನು ಕಂಡ ಕಾಂಗ್ರೆಸ್ಸಿಗರು, ಇಲ್ಲಿ ನಮಗೆ ಹೆಚ್ಚು ಮತ ಬರಲು ಏನು ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದಾರೆ.

Advertisement

ನಮ್ಮ ಭಾಗದಾಗ ಬಿಜೆಪಿ ಹೆಚ್ಚ ಇತ್ರಿ. ಕಳೆದ ಬಾರಿ ನಮ್ಮೂರಾಗ 1400 ಓಟ ಬಿಜೆಪಿಗೆ ಬಂದಿದ್ದು. ಈ ಬಾರಿ ನ್ಯಾಮಗೌಡ್ರು ಸತ್ತಿದ್ಕ ಎಲ್ಲಾರಿಗೂ ಅನುಕಂಪ ಐತ್ರಿ. ಹಳ್ಯಾಗ್‌ ಬಿಜೆಪಿ ಪ್ರಮಾಣ ಹೆಚ್ಚ ಇದ್ರೂ, ಪ್ಯಾಟ್ಯಾಗ್‌ ಆನಂದ ನ್ಯಾಮಗೌಡ್ರು ಹೆಚ್ಚು ಓಟ್‌ ತಗೋತಾರ. ಯಾರರೇ ಗೆಲ್ಲಲಿ, ನಮ್ಮ ಊರ, ರೈತರ ಸಮಸ್ಯೆ ಯಾರೂ ಹೇಳುವಲ್ರು. ಬರೀ ಭಾಷಣ ಮಾಡಿ ಹೊಕ್ಕಾರ್‌.
 ಶ್ರೀಮಂತ ರಾಮಪ್ಪ ಮಾಳಿ,
 ಗದ್ಯಾಳದ ರೈತ

ಕನ್ನೊಳ್ಳಿ, ಗದ್ಯಾಳ, ಕುರುಗೋಡ, ಕಾಜಿಬೀಳಗಿ ಸೇರಿದಂತೆ ಸಾವಳಗಿ ಭಾಗದಲ್ಲಿ ನಮಗೆ ಕಳೆದ ಬಾರಿ ಕಡಿಮೆ ಮತ ಬಂದಿದ್ದವು. ಈಗ ಮೊದಲಿನ ಪರಿಸ್ಥಿತಿ ಇಲ್ಲ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡಿದ್ದೇವೆ. ಏನು ಕೆಲಸ ಆಗಬೇಕು ಎಂಬುದರ ಪಟ್ಟಿ ಮಾಡಿದ್ದು, ಚುನಾವಣೆ ಬಳಿಕ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇವೆ.
ಸದಾನಂದ ವಿ. ಡಂಗನವರ,
ಕನ್ನೊಳ್ಳಿ-ಗದ್ಯಾಳ ಗ್ರಾ.ಪಂ.ನ ಕಾಂಗ್ರೆಸ್‌ ಉಸ್ತುವಾರಿ

ಶ್ರೀಶೈಲ ಕೆ. ಬಿರಾದಾರ 

Advertisement

Udayavani is now on Telegram. Click here to join our channel and stay updated with the latest news.

Next