ನವದೆಹಲಿ: ಬಾಲಿವುಡ್ ಸೇರಿದಂತೆ ದೇಶಾದ್ಯಂತ ತೀವ್ರ ಚರ್ಚೆ, ಸುದ್ದಿಗೆ ಕಾರಣವಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಶಾಂತ್ ಸಿಂಗ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ದಿಲ್ಲಿಯ ಏಮ್ಸ್ ನ ವೈದ್ಯರ ತಂಡ ಸಿಬಿಐಗೆ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಆಂಗ್ಲವಾಹಿನಿಯೊಂದಕ್ಕೆ ಲಭಿಸಿರುವ ಮೂಲಗಳ ಪ್ರಕಾರ, ವಿಷ ಪ್ರಾಶನ ಮಾಡಿ ಕೊಲೆಗೈಯಲಾಗಿದೆ ಮತ್ತು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಸುಶಾಂತ್ ಕುಟುಂಬ ಸದಸ್ಯರ, ವಕೀಲರ ಆರೋಪವನ್ನು ತಳ್ಳಿಹಾಕಿರುವುದಾಗಿ ವಿವರಿಸಿದೆ.
34ವರ್ಷದ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ನಿವಾಸದಲ್ಲಿ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಇದೊಂದು ಆತ್ಮಹತ್ಯೆ ಎಂದು ತಿಳಿಸಿದ್ದರು.
ಏತನ್ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸುಶಾಂತ್ ಸಾವಿನ ಬಗ್ಗೆ ಊಹಾಪೋಹಗಳು ಹರಿದಾಡತೊಡಗಿದ್ದು, ನ್ಯಾಯ ಸಿಗಬೇಕೆಂದು ಒತ್ತಾಯಿಸಲಾಗಿತ್ತು. ಸುಶಾಂತ್ ಕುಟುಂಬ ಸದಸ್ಯರು ಕೂಡಾ ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ, ಬಿಹಾರದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದರು. ಈ ಎಲ್ಲಾ ಒತ್ತಡದ ನಡುವೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು.
ಮೂಲಗಳ ಪ್ರಕಾರ, ಏಮ್ಸ್ ತಂಡ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಈ ಪ್ರಕರಣದ ಬಗ್ಗೆ ಸಿಬಿಐಗೆ ಮೆಡಿಕೋ ಲೀಗಲ್ ಅಭಿಪ್ರಾಯವನ್ನು ತಿಳಿಸಿದ ಬಳಿಕ ಫೈಲ್ ಅನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿದು ಬಂದಿದೆ.
ಸಿಬಿಐ ತನಿಖೆಯನ್ನು ಮುಂದುವರಿಸುವ ಸಾಧ್ಯತೆ ಇದೆ. ಬಿಹಾರ ಪೊಲೀಸರು ಪಟ್ಟಿ ಮಾಡಿರುವ ಅನುಮಾನಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ವರದಿ ಹೇಳಿದೆ.