ನವದೆಹಲಿ: ಅಮ್ಮನ ಗರ್ಭದಲ್ಲಿರುವ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯವನ್ನೂ 90 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಭೂಮಿಯನ್ನೇ ಕಾಣದ ಕಂದನ ಜೀವ ಉಳಿಸುವಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಮೂಲಕ ವೈದ್ಯೋ ನಾರಾಯಣೋ ಹರಿ ಎನ್ನುವ ಪದಕ್ಕೆ ನಿಜವಾದ ಅರ್ಥ ಕಲ್ಪಿಸಿಕೊಟ್ಟಿದ್ದಾರೆ.
ಅದಾಗಲೇ 3 ಬಾರಿ ಗರ್ಭಪಾತದಿಂದ ಮನನೊಂದಿದ್ದ 28 ವರ್ಷದ ಮಹಿಳೆಯೊಬ್ಬರು ಮತ್ತೂಮ್ಮೆ ಗರ್ಭಧರಿಸಿದ್ದರು. ಆದರೆ, ಈ ಬಾರಿಯೂ ಮಗುವಿನ ಹೃದಯದಲ್ಲಿ ಸಮಸ್ಯೆ ಇರುವುದನ್ನರಿತು ಬೇಸರಗೊಂಡಿದ್ದರು. ಏಮ್ಸ್‌ನ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ವೈದ್ಯರು ಮಗುವನ್ನು ಉಳಿಸಿಕೊಡುವ ಭರವಸೆ ನೀಡಿದ್ದು, ಹೃದ್ರೋಗ ತಜ್ಞರ ಜತೆ ಸೇರಿ, 90 ನಿಮಿಷದಲ್ಲಿ ಗರ್ಭದಲ್ಲಿರುವ ಭ್ರೂಣದ ಹೃದಯವನ್ನೇ ಶಸ್ತ್ರಚಿಕಿತ್ಸೆಗೊಳಪಡಿಸಿ ಅಡಚಣೆಗಳನ್ನು ನಿವಾರಿಸಿದ್ದಾರೆ.
ವೈದ್ಯರ ಕಾರ್ಯಕ್ಕೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದು, ನೆಟ್ಟಿಗರು ಕೂಡ ವೈದ್ಯರ ವೃತ್ತಿಧರ್ಮ, ಸೇವೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ.