ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 147 ಮಂದಿ ಏಡ್ಸ್ ಸೋಂಕಿತರು ಪತ್ತೆಯಾಗಿದ್ದಾರೆ. 17 ಜನಗರ್ಭಿಣಿಯರಲ್ಲೂ ಎಚ್‌ಐವಿ ಸೋಂಕು ದೃಢವಾಗಿದೆ. ಜಿಲ್ಲಾದ್ಯಂತ ಸಕ್ರಿಯ ಏಡ್ಸ್ ರೋಗಿಗಳ ಸಂಖ್ಯೆ 4,880 ಇದೆ. ಪುರುಷರು 2,022 ಹಾಗೂ ಮಹಿಳೆಯರು 2,399 ಜನ ಸೋಂಕಿತರಿದ್ದಾರೆ.
ಏಡ್ಸ್ ರೋಗದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸುರಕ್ಷಿತ ಲೈಂಗಿಕ ಕ್ರಿಯೆ ಕುರಿತು ಜಾಗೃತಿ ಮೂಡಿಸುತ್ತಿರುವುದಲ್ಲದೇ ಜನರಲ್ಲೂ ಅರಿವು ಮೂಡಿದೆ. ಆದರೂ, ಸೋಂಕು ಮಾತ್ರ ನಿಯಂತ್ರಣದಲ್ಲಿಲ್ಲ. ಈ ವರ್ಷದ ಅಕ್ಟೋಬರ್ ಅಂತ್ಯದವರೆಗೆ ಒಟ್ಟಾರೆ 27,005 ಜನರನ್ನು ಏಡ್ಸ್ ಸೋಂಕು ಪತ್ತೆಗೆ ಒಳಪಡಿಸಲಾಗಿದೆ. ಇದರಲ್ಲಿ 147 ಮಂದಿಗೆ ಏಡ್ಸ್ ಪಾಸಿಟಿವ್ ಕಂಡು ಬಂದಿದೆ. ಅದೇ ರೀತಿ 34,650 ಜನ ಗರ್ಭಿಣಿಯರಿಗೆ ಏಡ್ಸ್ ಪರೀಕ್ಷೆ ಮಾಡಲಾಗಿದ್ದು, 17 ಮಂದಿಗೆ ಸೋಂಕು ಕಾಣಿಸಿದೆ.
ಈ ಹಿಂದಿನ ಅಂಕಿ-ಅಂಶ ಗಮನಿಸಿದಾಗ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಶೇಕಡಾವಾರು ಸೋಂಕಿತರ ಪ್ರಮಾಣ ಅಧಿಕವಾಗಿದೆ. 2019-20ನೇ ಸಾಲಿನಲ್ಲಿ 1,02,579 ಮಂದಿಗೆ ಏಡ್ಸ್ ತಪಾಸಣೆ ಮಾಡಿದ್ದರೆ, 520 ಮಂದಿಗೆ ಪಾಸಿಟಿವ್ ಕಂಡು ಬಂದಿತ್ತು. ಶೇಕಡಾವಾರು ಪ್ರಮಾಣ 0.51ರಷ್ಟು ಆಗಿತ್ತು. ಈ ವರ್ಷ ಏಡ್ಸ್ ಸೋಂಕು ದೃಢವಾಗಿದೆ.
ಗರ್ಭಿಣಿಯರಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ 88,932 ಗರ್ಭಿಣಿಯರಿಗೆ ಪರೀಕ್ಷೆ ಮಾಡಲಾಗಿ, 16 ಮಂದಿಗೆ ರೋಗ ಪತ್ತೆಯಾಗಿತ್ತು. ಅಂದರೆ, ಶೇ.0.01ರಷ್ಟು ಗರ್ಭಿಣಿಯರಿಗೆ ಏಡ್ಸ್ ಕಾಣಿಸಿಕೊಂಡಿತ್ತು. ಈ ಸಲ 34,650 ಜನ ಗರ್ಭಿಣಿಯರಿಗೆ ಪರೀಕ್ಷೆ ಮಾಡಲಾಗಿದ್ದು, 17 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಶೇಕಡಾವಾರು ಪ್ರಮಾಣದಲ್ಲಿ ಶೇ.0.04ಕ್ಕೆ ಏರಿಕೆಯಾಗಿದೆ. ಇನ್ನು, ಹಿಂದಿನ ವರ್ಷಗಳಲ್ಲಿ ಅಂದರೆ 2016 -17 ಸಾಲಿನಲ್ಲಿ ಏಡ್ಸ್ ಸೋಂಕಿತ ಗರ್ಭಿಣಿಯರ ಪ್ರಮಾಣ ಶೇ.0.04 ಇತ್ತು. ಆ ವರ್ಷ 73,730 ಜನ ಗರ್ಭಿಣಿಯರು ತಪಾಸಣೆ ಒಳಗಾಗಿದ್ದರು. 33 ಮಂದಿಗೆ ಪಾಸಿಟಿವ್ ದೃಢಪಟ್ಟಿತ್ತು. 2017 -18 ಸಾಲಿನಲ್ಲಿ 89,811 ಜನರಲ್ಲಿ 43 ಮಂದಿ (ಶೇ.0.04), 2018 -19ರಲ್ಲಿ 90, 437 ಗರ್ಭಿಣಿಯರಲ್ಲಿ 35 ಜನರಿಗೆ (ಶೇ.0.03) ಏಡ್ಸ್ ಪತ್ತೆಯಾಗಿತ್ತು ಎನ್ನುತ್ತವೆ ಆರೋಗ್ಯ ಇಲಾಖೆಯ ಅಂಕಿ-ಅಂಶ.
ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 25 ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷೆ ಮತ್ತು ಆಪ್ತ ಸಮಾಲೋಚನೆ ಮಾಡಲಾಗುತ್ತದೆ. 115 ಪಿಐಸಿಟಿಸಿ ಕೇಂದ್ರಗಳಲ್ಲೂ ಎಚ್‌ಐವಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ನಗರದ ಜಿಲ್ಲಾಸ್ಪತ್ರೆ, ಜೇವರ್ಗಿ ಮತ್ತು ವಾಡಿಯಲ್ಲಿ ತಲಾ ಒಂದು ಎಆರ್‌ಟಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ 5 ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರನ್ನು ಗುರುತಿಸಿ ಇವರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸಿ ಪ್ರತಿ 3 ತಿಂಗಳಿಗೆ ಆರೋಗ್ಯ ತಪಾಸಣೆ ಮತ್ತು 6 ತಿಂಗಳಿಗೆ ಒಮ್ಮೆ ಎಚ್‌ಐವಿ ಪರೀಕ್ಷೆ ಮಾಡಿಸುವಲ್ಲಿ ಜೀವನ ಜ್ಯೋತಿಮಹಿಳಾ ಅಭಿವೃದ್ಧಿ ಸಂಸ್ಥೆ ಮತ್ತು ಸ್ನೇಹಾ ಸೊಸೈಟಿ ತೊಡಗಿಕೊಂಡಿದೆ. ದಿವ್ಯ ಜೀವನ ಪಾಸಿಟಿವ್ ನೆಟ್‌ವರ್ಕ್ ಸಂಸ್ಥೆಯು ಎಚ್‌ಐವಿ ಸೋಂಕಿತರನ್ನು ನೋಂದಾಯಿಸಿ, ಮುಂದಿನ ಜೀವನ, ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಕಾನೂನು ನೆರವು, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಹೊಣೆ ಹೊತ್ತುಕೊಂಡಿದೆ.
ಸಾಥಿ ಎಂಬ ಸಂಸ್ಥೆ ಕಾರಾಗೃಹದ ಕೈದಿಗಳು, ಬಾಲಕಿಯರ/ಬಾಲ ಮಂದಿರದಲ್ಲಿರುವ ಮಕ್ಕಳು ಜಾಗೃತಿ ಮೂಡಿಸುತ್ತಿದೆ. ಸ್ವಾಮಿ ವಿವೇಕಾನಂದ ಯೂಥ್ ಸಂಸ್ಥೆಯೂ ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವತೆ ಸಾಧಿಸುವ ಕೆಲಸ ಮಾಡುತ್ತಿದೆ. ಪ್ರತಿವರ್ಷ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರನ್ನು ಸೋಂಕು ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುತ್ತಿದೆ.