Advertisement

AICC: ರಾಜ್ಯಕ್ಕೆ ಕಾಂಗ್ರೆಸ್‌ನಿಂದ ನಾಲ್ವರು ಕಾರ್ಯದರ್ಶಿಗಳ ನೇಮಕ

01:56 AM Aug 31, 2024 | Team Udayavani |

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ನೂತನ ಕಾರ್ಯದರ್ಶಿಗಳು ಹಾಗೂ ಜಂಟಿ ಕಾರ್ಯದರ್ಶಿಗಳು ಹಾಗೂ ಉಸ್ತುವಾರಿಗಳನ್ನು ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಕರ್ನಾಟಕದಲ್ಲಿ ಸ್ವತಃ ಕಾಂಗ್ರೆಸ್‌ ಆಡಳಿತ ಪಕ್ಷವಾಗಿದೆ. ಇಲ್ಲಿ ನೆರೆಯ ಕೇರಳ ಶಾಸಕ ರೋಜಿ ಎಂ. ಜಾನ್‌, ತಮಿಳುನಾಡಿನ ಮಯೂರ ಎಸ್‌. ಜಯಕುಮಾರ್‌, ಪಿ. ಗೋಪಿ ಮತ್ತು ಎಐಸಿಸಿ ಪದಾಧಿಕಾರಿ ಅಭಿಷೇಕ್‌ ದತ್‌ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಇವರು ಆಡಳಿತಾರೂಢ ಕಾಂಗ್ರೆಸ್‌ ಸಂಘಟನೆ, ವಿಪಕ್ಷಗಳಿಗೆ ಪ್ರತಿಯಾಗಿ ತಂತ್ರಗಾರಿಕೆ, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತಿತರ ಹೊಣೆಗಾರಿಕೆ ನಿಭಾಯಿಸಲಿದ್ದಾರೆ. ಕೆಪಿಸಿಸಿ ಮತ್ತು ಎಐಸಿಸಿ ನಡುವಿನ ಕೊಂಡಿಯಾಗಿಯೂ ಕೆಲಸ ಮಾಡಲಿದ್ದಾರೆ.

ಇನ್ನು ನೂತನವಾಗಿ ನೇಮಕಗೊಂಡ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳ ಪಟ್ಟಿಯಲ್ಲಿ ರಾಜ್ಯದ ಕೆಲವು ನಾಯಕರು ನೆರೆಯ ರಾಜ್ಯಗಳ ಉಸ್ತುವಾರಿಗಳೂ ಆಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮನ್ಸೂರ್‌ ಅಲಿಖಾನ್‌ ಕೇರಳ ಮತ್ತು ಲಕ್ಷದ್ವೀಪದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅದೇ ರೀತಿ ಮಹಾರಾಷ್ಟ್ರಕ್ಕೆ ವಿಧಾನ ಪರಿಷತ್ತಿನ ಸದಸ್ಯ ಯು.ಬಿ. ವೆಂಕಟೇಶ್‌, ತಮಿಳುನಾಡು ಮತ್ತು ಪುದುಚೇರಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್‌ ಹೆಗ್ಡೆ, ಉತ್ತರ ಕನ್ನಡದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ| ಅಂಜಲಿ ನಿಂಬಾಳ್ಕರ್‌ ಗೋವಾ, ದಾದ್ರಾ ಮತ್ತು ನಗರಹವೇಲಿ, ದಾಮನ್‌ ಮತ್ತು ದಿಯು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೂತನ ಕಾರ್ಯದರ್ಶಿಗಳು
ಕೇರಳ, ಲಕ್ಷದ್ವೀಪ-ಮನ್ಸೂರ್‌ ಅಲಿ ಖಾನ್‌
ಮಹಾರಾಷ್ಟ್ರ-ಯು.ಬಿ. ವೆಂಕಟೇಶ್‌
ತಮಿಳುನಾಡು, ಪುದುಚೇರಿ-ಸೂರಜ್‌ ಹೆಗ್ಡೆ
ಗೋವಾ, ದಾದ್ರಾ ಮತ್ತು ನಗರಹವೇಲಿ,
ದಾಮನ್‌ ಮತ್ತು ದಿಯು
– ಡಾ| ಅಂಜಲಿ ನಿಂಬಾಳ್ಕರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next