Advertisement

ಉಪವಾಸ ಸತ್ಯಾಗ್ರಹಕ್ಕೆ ಎಐಎಡಿಎಂಕೆ ನಿರ್ಧಾರ

07:00 AM Mar 31, 2018 | Team Udayavani |

ಮಧುರೈ: ಕಾವೇರಿ ವಿವಾದಕ್ಕೆ ಸಂಬಂಧಿಸಿ ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನೀಡಿದ್ದ 6 ವಾರಗಳ ಗಡುವು ಗುರುವಾರ ಮುಕ್ತಾಯಗೊಂಡಿದ್ದರೂ, ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮಧ್ಯೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

Advertisement

ಸದ್ಯ ಆಡಳಿತಾರೂಢ ಎಐಎಡಿಎಂಕೆ ಏಪ್ರಿಲ್‌ 2 ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶುಕ್ರವಾರ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಜಲ್ಲಿಕಟ್ಟು ವಿಚಾರದಲ್ಲಿ ಈ ಹಿಂದೆ ನಡೆಸಿದ ಪ್ರತಿಭಟನೆ ಮಾದರಿಯಲ್ಲೇ ಮರಿನಾ ಬೀಚನ್ನೇ ಕೇಂದ್ರವಾಗಿರಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಗುರುವಾರ ರಾತ್ರಿ ಈ ಸಂಬಂಧ ಪಕ್ಷದ ಮುಖಂಡರು ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೆ ಏಪ್ರಿಲ್‌ 15ರಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಲಿದ್ದು, ಅಂದು ಪ್ರಧಾನಿಗೆ ಕಪ್ಪು ಪಟ್ಟಿ ಪ್ರದರ್ಶಿಸಲು ಡಿಎಂಕೆ ನಿರ್ಧರಿಸಿದೆ.

ಇಂದು ಸುಪ್ರೀಂಗೆ ಮೊರೆ?
ಕೇಂದ್ರ ಸರಕಾರ ಇನ್ನೂ ಕಾವೇರಿ ಜಲ ನಿರ್ವಹಣೆ ಮಂಡಳಿ ಸ್ಥಾಪಿಸದೇ ಇರುವುದರಿಂದ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದ್ದೇವೆ ಎಂದು ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಹೇಳಿದ್ದಾರೆ. ಆದರೆ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗುತ್ತದೆಯೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಯಾವ ರೀತಿಯ ದೂರು ಸಲ್ಲಿಸಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಶನಿವಾರವೇ ಸುಪ್ರೀಂಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ಕೇಂದ್ರ ಸರಕಾರ ಪಾಲಿಸಬೇಕು. ನಮ್ಮ ರಾಜ್ಯದ ಜನರ ಹಿತಾಸಕ್ತಿಗಾಗಿ ಧ್ವನಿಯೆತ್ತಲು ನಾವು ಸದಾ ಸಿದ್ಧರಿರುತ್ತೇವೆ. ನಮ್ಮ ಸಂಸದರೂ ಸತತ 17 ದಿನಗಳ ಕಾಲ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪನ್ನೀರ್‌ಸೆಲ್ವಂ, ತಮಿಳುನಾಡು ಉಪಮುಖ್ಯಮಂತ್ರಿ

ಎಐಎಡಿಎಂಕೆ ನಾಟಕವಾಡುತ್ತಿ ರುವುದು ಎಲ್ಲರಿಗೂ ಗೊತ್ತಿದೆ. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ದಿನದೊಳಗೆ ಮಂಡಳಿ ರಚಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಷ್ಟು ಧೈರ್ಯ ರಾಜ್ಯ ಸರಕಾರಕ್ಕಿಲ್ಲ.
ಎಂ.ಕೆ. ಸ್ಟಾಲಿನ್‌, ಡಿಎಂಕೆ ಕಾರ್ಯಾಧ್ಯಕ್ಷ

Advertisement

ಈ ವಿಚಾರದಲ್ಲಿ ನಾವೇನೂ ರಾಜ ಕೀಯ ಮಾಡುತ್ತಿಲ್ಲ. ಇದು ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪು. ನ್ಯಾಯಾಲಯದ ತೀರ್ಪನ್ನು ಯಾವುದೇ ಸರಕಾರವಾದರೂ ಗೌರವಿಸಲೇಬೇಕು.
 ನಾರಾಯಣನ್‌ ತಿರುಪತಿ, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next