Advertisement

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

04:22 PM Oct 04, 2023 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಘಟನೆಗಳ ಮೇಲೆ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡುವ ಸಲುವಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ತೊರೆದಿದ್ದೇವೆ. ಸಂಬಂಧ ಕಡಿದುಕೊಳ್ಳುವಲ್ಲಿ ಬೇರೆ ಯಾವುದೇ ಅಂಶಗಳು ಪಾತ್ರವಹಿಸಿಲ್ಲ ಎಂದು ಮಾಜಿ ಸಿಎಂ, ಎಐಎಡಿಎಂಕೆ ಅಧ್ಯಕ್ಷ ಎ. ಪಳನಿಸ್ವಾಮಿ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಒತ್ತಡವಿರಲಿಲ್ಲ, 2024 ರ ಲೋಕಸಭೆ ಚುನಾವಣೆಗೆ ಸೀಟುಗಳ ಸಂಖ್ಯೆಯ ಬಗ್ಗೆ ಬಿಜೆಪಿ ಬೇಡಿಕೆಯ ಬಗ್ಗೆ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಕೆಲ ಮಾಧ್ಯಮಗಳ ಒಂದು ಬದಿಯ ವರದಿಗಳು ಸುಳ್ಳು. ನಾವು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿಲ್ಲ ಎಂದು ಹೇಳಿದರು.

ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ‘ನಾಟಕ’ ಎಂದು ಬಣ್ಣಿಸಿದ ಪಳನಿಸ್ವಾಮಿ,’ ವ್ಯತಿರಿಕ್ತ ಅಭಿಪ್ರಾಯಗಳನ್ನು ಹೊಂದಿರುವ ಪಕ್ಷಗಳ ಒಗ್ಗೂಡುವಿಕೆಯಾಗಿದ್ದು, ಸ್ಪಷ್ಟ ಆಕಾರವನ್ನು ಪಡೆಯುತ್ತಿಲ್ಲ. ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿಯಾಗುವ ವರ್ಷಾಂತ್ಯದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದನ್ನು ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಕುರಿತು ಉದಾಹರಣೆಯಾಗಿ ಉಲ್ಲೇಖಿಸಿದರು.

ಟಿಎಂಸಿ ವರಿಷ್ಠೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕಮ್ಯುನಿಸ್ಟರೊಂದಿಗೆ ಯಾವುದೇ ಹೊಂದಾಣಿಕೆ ಇಲ್ಲ, ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಿಪಿಐ-ಎಂ ಪಕ್ಷವು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವುದಿಲ್ಲ. ಎಎಪಿ ಆಡಳಿತವಿರುವ ಪಂಜಾಬ್ ಮತ್ತು ದೆಹಲಿಯಲ್ಲೂ ಅದೇ ರೀತಿ ಆಗಿದೆ ಎಂದರು.

ಸೆಪ್ಟೆಂಬರ್ 25 ರ ಸಭೆಯನ್ನು ನೆನಪಿಸಿಕೊಂಡ ಪಳನಿಸ್ವಾಮಿ, ಎರಡು ಕೋಟಿ ಮಂದಿ ಪಕ್ಷದ ಕಾರ್ಯಕರ್ತರು, ಪ್ರಮುಖ ಪದಾಧಿಕಾರಿಗಳ ಭಾವನೆಗಳನ್ನು ತಿಳಿಸಿದ ನಂತರ ಎಐಎಡಿಎಂಕೆಯು ಎನ್ ಡಿಎ ಮೈತ್ರಿಕೂಟಕ್ಕೆ ವಿದಾಯ ಹೇಳಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2024 ರಲ್ಲಿ ತನ್ನದೇ ಆದ ಮೈತ್ರಿಕೂಟವನ್ನು ಮುನ್ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದರು.

Advertisement

ಕೆಲವು ಎಐಎಡಿಎಂಕೆ ಶಾಸಕರು ಮಂಗಳವಾರ ಕೊಯಮತ್ತೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದಾರೆ, ಕಾರಣವೇನು ಎಂದು ಪ್ರಶ್ನಿಸಿದಾಗ, ಶಾಸಕರು ಚುನಾಯಿತ ಪ್ರತಿನಿಧಿಗಳಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಅವರು ತೆಂಗು ರೈತರ ಕಲ್ಯಾಣ ಸೇರಿದಂತೆ ಕೆಲವು ಸಮಸ್ಯೆಗಳನ್ನು ತೆಗೆದುಕೊಂಡು ಹೋಗಿದ್ದಾರಷ್ಟೇ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next