Advertisement
ಸೋಮವಾರ ಬೆಳಗ್ಗೆಯಿಂದಲೇ ಎರಡೂ ಬಣಗಳಲ್ಲಿ ಭಾರೀ ಚಟುವಟಿಕೆ ಕಂಡು ಬಂದಿತು. ಮಧ್ಯಾಹ್ನ 12-1 ಗಂಟೆಯ ವೇಳೆಯಲ್ಲೇ ಘೋಷಣೆಯಾಗಲಿದೆ ಎಂದು ಹೇಳಲಾಗಿತ್ತಾದರೂ ಪನ್ನೀರ್ ಸೆಲ್ವಂ ಬಣ ಶಶಿಕಲಾರನ್ನು ಉಚ್ಚಾಟಿಸುವ ಕುರಿತಂತೆ ಸ್ಪಷ್ಟ ಅಭಿಪ್ರಾಯ ಬೇಕು ಎಂದು ಪಟ್ಟು ಹಿಡಿಯಿತು. ಈ ಸಂಬಂಧ ಸದ್ಯ ಪಕ್ಷದ ಸಾಮಾನ್ಯ ಸಭೆ ಕರೆದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ ಅನಂತರ ವಿಲೀನಕ್ಕೆ ಒಪ್ಪಿಗೆ ನೀಡಲಾಯಿತು.
ಪನ್ನೀರ್ ಓಕೆ ಮಾಡಿದ ತತ್‌ಕ್ಷಣವೇ ಮುಖ್ಯಮಂತ್ರಿ ಪಳನಿಸ್ವಾಮಿ, ಆರು ತಿಂಗಳ ಅನಂತರ ಪ್ರಧಾನ ಕಚೇರಿಗೆ ಆಗಮಿಸಿದ ಪನ್ನೀರ್ ಸೆಲ್ವಂ ಅವರನ್ನು ಎದುರುಗೊಳ್ಳಲು ಹೋದರು. ಪಕ್ಷದ ಕಚೇರಿಗೆ ಬಂದ ಪನ್ನೀರ್‌ಸೆಲ್ವಂ ಅವರನ್ನು ಸ್ವಾಗತಿಸಿದ ಎಐಎಡಿಎಂಕೆ ನಾಯಕರು, ಬಳಿಕ ಜತೆಯಾಗಿಯೇ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪನ್ನೀರ್ ಸೆಲ್ವಂ ‘ನನ್ನ ಹೃದಯಕ್ಕೆ ಭಾರವಾಗಿದ್ದ ಅಡ್ಡಿ ಹೋಗಿದೆ. ನಾವು ಅಮ್ಮಾ ಮಕ್ಕಳಾಗಿದ್ದು, ಒಂದಾಗಿದ್ದೇವೆ. ಇನ್ನು ನಮ್ಮನ್ನು ಯಾವ ಶಕ್ತಿಯೂ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದರು. ರಾತ್ರಿ ನಡೆದ ಮಹತ್ವದ ಬೆಳವಣಿಗೆಯಲ್ಲಿ 18 ಶಾಸಕರು ಜಯಲಲಿತಾ ಸಮಾಧಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಜೈಲಲ್ಲಿರುವ ಶಶಿಕಲಾ ನಟರಾಜನ್ ಪರ ಘೋಷಣೆಗಳನ್ನು ಕೂಗುತ್ತಿದ್ದು, ಮಂಗಳವಾರ ರಾಜ್ಯಪಾಲ ರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
Related Articles
Advertisement
ಪನ್ನೀರ್ ಪ್ರಮಾಣ: ಜಯಾ ಸಮಾಧಿಯಿಂದ ಎಲ್ಲ ನಾಯಕರು ನೇರ ರಾಜಭವನದತ್ತ ಹೋದರು. ಸರಿಯಾಗಿ 4.30ಕ್ಕೆ ಪನ್ನೀರ್ ಸೆಲ್ವಂ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜತೆಗೆ ಒಪಿಎಸ್ ಬೆಂಬಲಿಗ ಕೆ. ಪಾಂಡಿರಾಜನ್ ಕೂಡ ತಮಿಳು ಭಾಷೆ ಮತ್ತು ಸಂಸ್ಕೃತಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪನ್ನೀರ್ ಸೆಲ್ವಂ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದು, ಹಣಕಾಸು, ಗ್ರಾಮ ಮತ್ತು ನಗರ ಪ್ರದೇಶಗಳ ವಸತಿ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮೋದಿ ಸ್ವಾಗತ: ಸೋಮವಾರ ಬೆಳಗ್ಗೆಯಿಂದಲೇ ದಿಲ್ಲಿಯಿಂದಲೇ ತಮಿಳುನಾಡು ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿಜೆಪಿ ನಾಯಕರು ಸಂಜೆ ವೇಳೆಗೆ ನಿಟ್ಟುಸಿರು ಬಿಟ್ಟರು. ವಿಶೇಷವೆಂದರೆ, ಎರಡು ಬಣಗಳು ವಿಲೀನ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುತ್ತಲೇ ಮೊದಲಿಗೆ ಶುಭ ಕೋರಿದವರು ಪ್ರಧಾನಿ ನರೇಂದ್ರ ಮೋದಿ. ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಪನ್ನೀರ್‌ಸೆಲ್ವಂ ಅವರಿಗೆ ಸ್ವಾಗತವೆಂದ ಮೋದಿ ಅವರು, ಪಳನಿಸ್ವಾಮಿ ಸರಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಟ್ವೀಟಿಸಿದರು. ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದಾದ ಬಳಿಕವೇ ವಿಲೀನಕ್ಕೆ ವೇಗ ಸಿಕ್ಕಿತು ಎಂದು ಹೇಳಲಾಗುತ್ತಿದೆ.
ಆರ್‌ಎಸ್‌ಎಸ್ ಮಧ್ಯಸ್ಥಿಕೆ?: ಮೂಲಗಳ ಪ್ರಕಾರ, ಸೋಮವಾರ ಮಧ್ಯಾಹ್ನವೂ ಎರಡೂ ಬಣಗಳ ಮಾತುಕತೆ ಮುರಿದುಬಿದ್ದಿತ್ತು ಎಂದೇ ಹೇಳಲಾಗುತ್ತಿದೆ. ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಬಳಿಕವಷ್ಟೇ ವಿಲೀನ ಎಂದು ಒಪಿಎಸ್ ಬಣ ಪಟ್ಟುಹಿಡಿಯಿತು ಎಂದು ಹೇಳಲಾಗಿದೆ. ಆದರೆ, ಆರ್‌ಎಸ್‌ಎಸ್ ಸಿದ್ಧಾಂತ ಪ್ರತಿಪಾದಿಸುವ ಎಸ್. ಗುರುಮೂರ್ತಿ ಅವರು ಸಂಧಾನ ನಡೆಸಿ ಬಿಕ್ಕಟ್ಟು ಬಗೆಹರಿಸಿದರು ಎಂದು ಹೇಳಲಾಗಿದೆ. ಶಶಿಕಲಾ ಹಾದಿ ಅಂತ್ಯ?
ಸದ್ಯದ ಬೆಳವಣಿಗೆಗಳು ಶಶಿಕಲಾ ಅವರ ಹಾದಿಯನ್ನು ಅಂತ್ಯಗೊಳಿಸಿವೆ ಎಂದೇ ಹೇಳಲಾಗುತ್ತಿದೆ. ಸದ್ಯ ಜೈಲಿನಲ್ಲಿರುವ ಶಶಿಕಲಾ ಬಿಡುಗಡೆ ಹೊಂದುವುದು ಇನ್ನೂ ತಡ. ಅಲ್ಲದೆ ದಿನಕರನ್ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಹೋಗಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅಲ್ಲದೆ ಶಶಿಕಲಾ ಅವರ ವಿರೋಧಿ ಎಂದೇ ಗುರುತಿಸಲಾಗಿದ್ದ ಪನ್ನೀರ್ ಸೆಲ್ವಂ ವಾಪಸಾಗಿರುವುದರಿಂದ ಎಐಎಡಿಎಂಕೆ ಬಾಗಿಲು ಇನ್ನು ತೆರೆಯಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದರೂ ಮತ್ತೆ ರಾಜಕೀಯದಲ್ಲಿ ಸ್ಥಾನ ಸಿಗುವುದೂ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಎನ್‌ಡಿಎಗೆ ಸೇರ್ಪಡೆ?
ಎಐಎಡಿಎಂಕೆ ಕೂಡ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸೇರ್ಪಡೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನಿಗದಿಯಾದ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮಿಳುನಾಡಿಗೆ ಸೋಮವಾರವೇ ಆಗಮಿಸಬೇಕಾಗಿತ್ತು. ಆದರೆ ಪ್ರವಾಸ ರದ್ದು ಮಾಡಿರುವ ಅವರು ದಿಲ್ಲಿಯಲ್ಲೇ ಉಳಿದು ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಕೇಂದ್ರದ ಸಂಪುಟ ಪುನಾರಚನೆಯಾಗಲಿದ್ದು, ಇದರಲ್ಲಿ ಎಐಎಡಿಎಂಕೆಯಿಂದ ಮೂವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ಎನ್‌ಡಿಎಗೆ ವಾಪಸ್ ಆಗಿರುವ ಜೆಡಿಯುನಿಂದಲೂ ಇಬ್ಬರು ಸಂಪುಟ ಸೇರಬಹುದು ಎನ್ನಲಾಗಿದೆ. ಎಐಎಡಿಎಂಕೆಯಿಂದ ಒಬ್ಬರಿಗೆ ಕ್ಯಾಬಿನೆಟ್ ಹಾಗೂ ಇಬ್ಬರಿಗೆ ಸಹಾಯಕ ಸಚಿವರ ಸ್ಥಾನ ನೀಡಬಹುದು ಎನ್ನಲಾಗಿದೆ. ಅಂತೆಯೇ ಜೆಡಿಯುನಲ್ಲೂ ಓರ್ವರಿಗೆ ಕ್ಯಾಬಿನೆಟ್ ಹಾಗೂ ಓರ್ವರಿಗೆ ರಾಜ್ಯ ಖಾತೆ ಸಿಗುವ ಸಂಭವವಿದೆ. ಶೀಘ್ರ ಚುನಾವಣಾ ಆಯೋಗಕ್ಕೆ ಮನವಿ
ಪಕ್ಷದಲ್ಲಿ ಎರಡು ಬಣಗಳಾಗಿದ್ದರಿಂದ ಎಐಎಡಿಎಂಕೆಯ ಚಿಹ್ನೆಯಾದ ಎರಡೆಲೆ ಯಾರಿಗೂ ಸಿಕ್ಕಿಲ್ಲ. ಇದೀಗ ವಿಲೀನವಾಗಿದ್ದರಿಂದ ಈ ಚಿಹ್ನೆ ಪಡೆದುಕೊಳ್ಳುವುದು ಸುಲಭವಾಗಲಿದೆ. ಹೀಗಾಗಿ ಸದ್ಯದಲ್ಲೇ ದಿಲ್ಲಿಗೆ ತೆರಳಲಿರುವ ನಾಯಕರು ಕೇಂದ್ರ ಚುನಾವಣಾ ಆಯೋಗದ ಮುಂದೆ ಚಿಹ್ನೆಗಾಗಿ ಮನವಿ ಸಲ್ಲಿಸಲಿದ್ದಾರೆ. ಒಂದಾಗಲು ಡೀಲ್
ಎರಡೂ ಬಣ ಒಂದಾಗಲು ಕೆಲವೊಂದು ಒಪ್ಪಂದವನ್ನೂ ಮಾಡಿಕೊಂಡಿವೆ. ಇದರ ಪ್ರಕಾರ ಪನ್ನೀರ್ ಸೆಲ್ವಂಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪಕ್ಷದ ಮುಖ್ಯ ಸಂಚಾಲಕ ಹುದ್ದೆ. ಮುಖ್ಯಮಂತ್ರಿ ಪಳನಿಸ್ವಾಮಿಗೆ ಉಪ ಸಂಚಾಲಕ ಹುದ್ದೆ ನೀಡುವ ಮೂಲಕ ಈ ಇಬ್ಬರು ಪಕ್ಷದ ಆಗುಹೋಗುಗಳನ್ನು ನೋಡಿಕೊಳ್ಳುವುದು. ಒಟ್ಟು 13 ಮಂದಿಯ ಈ ಸಮನ್ವಯ ಸಮಿತಿಯಲ್ಲಿ ಇಪಿಎಸ್ ಬಣದಿಂದ 10 ಹಾಗೂ ಒಪಿಎಸ್ ಬಣದಿಂದ ಮೂವರು ಇರಲಿದ್ದಾರೆ. ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಸಂಬಂಧ ಸದ್ಯದಲ್ಲೇ ಸಾಮಾನ್ಯ ಸಭೆ ಕರೆಯುವುದು. ದಿನಕರನ್ ಅವರನ್ನು ಸಂಪೂರ್ಣವಾಗಿ ಪಕ್ಷದಿಂದ ಹೊರಗೆ ಕಳುಹಿಸುವುದು.