ಚೆನ್ನೈ: ಎಐಎಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡು ಏಕಾಂಗಿಯಾಗಿ ಸ್ಪರ್ಧಿಸಲು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬಯಸಿದ್ದಾರೆ ಎಂದು ತಮಿಳು ನಾಡು ರಾಜಕೀಯದಲ್ಲಿ ಭಾರಿ ಚರ್ಚೆಯಾಗಿತ್ತು. ಈ ಕುರಿತು ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ, ಆ ಕುರಿತು ಪಕ್ಷದ ನಾಯಕತ್ವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಅಣ್ಣಾಮಲೈ ಎಐಎಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡು ಏಕಾಂಗಿಯಾಗಿ ಸ್ಪರ್ಧಿಸಲು ಬಯಸಿದ್ದಾರೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಪಕ್ಷದ ಪದಾಧಿಕಾರಿಗಳೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ ಈ ವಿಷಯ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಎಐಎಡಿಎಂಕೆ-ಬಿಜೆಪಿ ಮೈತ್ರಿ ಮುಂದುವರಿಯಲಿದೆಯೇ ಅನ್ನುವುದು ಮತ್ತೆ ಚರ್ಚಾಸ್ಪದವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಚೆನ್ನೈನಲ್ಲಿ ಸುದ್ದಿಗಾರರಿಗೆ ಸಂದರ್ಶನ ನೀಡಿದ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ, ”ತಮಿಳುನಾಡು ರಾಜಕೀಯ ಕ್ಷೇತ್ರ ಹಣವಿಲ್ಲದೆ ಚುನಾವಣೆ ಎದುರಿಸಲಾಗದ ಸ್ಥಿತಿಗೆ ಬಂದಿದೆ. ಗುಣ ಮಾತ್ರ ಬದಲಾಗಿದೆ… ಆಡಳಿತ ಪಕ್ಷವಾದರೆ ಹೆಚ್ಚು, ವಿರೋಧ ಪಕ್ಷವಾದರೆ ಸ್ವಲ್ಪ ಕಡಿಮೆ ಕೊಟ್ಟರೆ ಜನ ಸ್ವೀಕರಿಸುತ್ತಾರೆ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬದಲಾಗಿದೆ. ಇದನ್ನು ನಾನು ಒಪ್ಪುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.