Advertisement

ಎಐ ಆಧಾರಿತ ಕಸ ಪತ್ತೆ ವ್ಯವಸ್ಥೆ!

12:36 AM Feb 13, 2020 | Team Udayavani |

ಬೆಂಗಳೂರು: ಯಾವ ಪ್ರದೇಶದಲ್ಲಿ ಎಷ್ಟು ಕಸ ವಿಲೇವಾರಿಯಾಗಿದೆ? ಇನ್ನೂ ಎಷ್ಟು ವಿಲೇವಾರಿಯಾಗದೆ ಉಳಿದಿದೆ? ಇದರ ಪತ್ತೆಗೆ ಬೆಳಗಾವಿ ಮಹಾನಗರ ಪಾಲಿಕೆಯು ಅಳವಡಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆ ಈಗ ಐಟಿ ರಾಜಧಾನಿಗೇ ಮಾದರಿ ಆಗುವ ಸಾಧ್ಯತೆ ಇದೆ.

Advertisement

ಕೃತಕ ಬುದ್ಧಿಮತ್ತೆ ಮೂಲಕ ಕಸ ಪತ್ತೆಹಚ್ಚುವ ತಂತ್ರಜ್ಞಾನವನ್ನು ಬೆಳಗಾವಿ ಮಹಾನಗರ ಪಾಲಿಕೆ ಕಳೆದ ಮೂರು ತಿಂಗಳಿಂದ ಅಳವಡಿಸಿಕೊಂಡಿದೆ. ನಗರದ ವಾರ್ಡ್‌ನಲ್ಲಿರುವ ಬ್ಲಾಕ್‌ ಸ್ಪಾಟ್‌ಗಳಲ್ಲಿ ಬಿದ್ದಿರುವ ಕಸವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಆ್ಯಪ್‌ಗೆ ಅಪ್‌ಲೋಡ್‌ ಮಾಡಿದರೆ, ಆ ಕಸದ ಮಾದರಿಯನ್ನು ಹೇಳುತ್ತದೆ. ಜತೆಗೆ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ಹೋಗುತ್ತದೆ. ಅದರಿಂದ ತಕ್ಷಣ ತೆರವುಗೊಳಿಸಬಹುದು.

ಅಸಮರ್ಪಕ ಕಸ ವಿಲೇವಾರಿಗೂ ಇದು ಕಡಿವಾಣ ಹಾಕಲಿದೆ. ಎಸ್‌ಸಿಎನ್‌ ಇನ್ನೋವೇಷನ್ಸ್ ಎಲ್‌ಎಲ್‌ಪಿ ಕಂಪನಿ ಈ ಆ್ಯಪ್‌ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್‌ ಮತ್ತು ಸುಸ್ಥಿರ ನಗರ ಪರಿಹಾರಗಳು ಕುರಿತ 16ನೇ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಬೆಳಗಾವಿ ಪಾಲಿಕೆಗೆ ಸಂಬಂಧಿಸಿದ ಮಳಿಗೆಯಲ್ಲಿ ಇದನ್ನು ಕಾಣಬಹುದು.

ಬೆಳಗಾವಿ ಪಾಲಿಕೆಯೂ ಈಗಷ್ಟೇ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಯಾವ ಪ್ರದೇಶದಲ್ಲಿ ಕಸ ಇದೆ. ಕಸ ಬಿದ್ದಿರುವುದನ್ನು ಮೊಬೈಲ್‌ನಲ್ಲಿ ಚಿತ್ರ ತೆಗೆದು ಆ್ಯಪ್‌ಗೆ ಅಪ್‌ಲೋಡ್‌ ಮಾಡಿದರೆ ಒಣ, ಹಸಿ, ಪ್ಲಾಸ್ಟಿಕ್‌, ಮೆಟಲ್‌ ಸೇರಿದಂತೆ ವಿವಿಧ ಪ್ರಕಾರಗಳನ್ನಾಗಿ ವಿಂಗಡಿಸಿ ಕಸದ ವಿವರಣೆ ನೀಡುತ್ತದೆ. ಪೋಟೋ ತೆಗೆದ ಜಾಗ ಕೂಡ ಜಿಪಿಎಸ್‌ನಿಂದ ಪತ್ತೆಯಾಗಲಿದೆ. ಆಗ, ಆ ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ, ಪೌರ ಕಾರ್ಮಿಕರ ಮೂಲಕ ಕೂಡಲೇ ಹೋಗಿ ಕಸ ಸ್ವಚ್ಛಗೊಳಿಸಬಹುದು ಎಂದು ಕಂಪೆನಿ ನಿರ್ದೇಶಕ ಸುಮಿತ್‌ ಆನ್ವೇಕರ್‌ ತಿಳಿಸಿದರು.

ಈ ವ್ಯವಸ್ಥೆಯಿಂದ ಸಮರ್ಪಕ ಕಸ ವಿಲೇವಾರಿ ಸಾಧ್ಯವಾಗುವುದರಿಂದ ಪರೋಕ್ಷವಾಗಿ ಆದಾಯ ವೃದ್ಧಿಗೂ ಪೂರಕವಾಗಲಿದೆ. ಬೆಂಗಳೂರಿನಲ್ಲಿ ಇದರ ಅಳವಡಿಕೆಗೆ ಸಂಬಂಧಿಸಿದಂತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಪೂರಕ ಸ್ಪಂದನೆ ದೊರೆಯುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next