Advertisement

AI ಕೃತಕ ಬುದ್ಧಿಮತ್ತೆ ಅಮೆರಿಕಕ್ಕೆ ಸಡ್ಡು ಹೊಡೆದ ಚೀನ!

12:12 AM Dec 28, 2023 | Team Udayavani |

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ವಿಶ್ವಾದ್ಯಂತ ಈಗ ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಭಾರೀ ಸದ್ದು ಮಾಡುತ್ತಿದೆ. ಜಗತ್ತಿನ ಶ್ರೇಷ್ಠ ಹಾಗೂ ಅತ್ಯುನ್ನತ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳು ಈ ಬಗ್ಗೆ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದು ಎಐ ತಂತ್ರಜ್ಞಾನಾಧರಿತ ನವನವೀನ ಸಾಧನ, ಸಲಕರಣೆಗಳು, ಆ್ಯಪ್‌ಗ್ಳನ್ನು ಪರಿಚಯಿಸುತ್ತಿವೆ. ಬಹುತೇಕ ಐಟಿ ಕಂಪೆನಿಗಳು ಅಮೆರಿಕವನ್ನೇ ಕೇಂದ್ರಸ್ಥಾನವನ್ನಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದರಿಂದ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿಯೂ ಅಮೆರಿಕನ್‌ ಕಂಪೆನಿಗಳೇ ಮುಂದಿವೆ ಎಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಎಐ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿ ಯಲ್ಲಿರುವುದು ಚೀನ. ಇದು ಇಡೀ ಜಾಗತಿಕ ಸಮುದಾಯದ ಕುತೂಹಲಕ್ಕೆ ಕಾರಣವಾಗಿದೆ ಮಾತ್ರವಲ್ಲದೆ ಒಂದಿಷ್ಟು ಆತಂಕಕ್ಕೂ ಕಾರಣವಾಗಿದೆ.

Advertisement

ಎಐ ಪೇಟೆಂಟ್‌ಗಾಗಿ ಅರ್ಜಿ ಮುಂಚೂಣಿಯಲ್ಲಿ ಚೀನ
ಎಐ ಸಂಶೋಧನ ಕ್ಷೇತ್ರದಲ್ಲಿ 2010 ರಿಂದ 2020ರ ವರೆಗೆ ಜಾಗತಿಕವಾಗಿ ಒಟ್ಟು 3,06,333 ಎಐ ಪೇಟೆಂಟ್‌ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದರಲ್ಲಿ 1,47,477 ಅರ್ಜಿಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ಎಐ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಕೆ ಮತ್ತು ಒಪ್ಪಿಗೆ ಪಡೆದುಕೊಂಡಿರುವ ಅರ್ಜಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಚೀನ, ಅಮೆರಿಕವನ್ನೂ ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ. ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ದಶಕದ ಅವಧಿಯಲ್ಲಿ ಚೀನ ಒಟ್ಟು 1,69,938 ಕ್ಕೂ ಅಧಿಕ ಪೇಟೆಂಟ್‌ ಅರ್ಜಿಗಳನ್ನು ಸಲ್ಲಿಸಿದೆ. ಈ ಪೈಕಿ 68,255 ಅರ್ಜಿಗಳಿಗೆ ಒಪ್ಪಿಗೆ ಪಡೆದುಕೊಳ್ಳುವ ಮೂಲಕ ಪೇಟೆಂಟ್‌ ಪಡೆದುಕೊಂಡಿದೆ. ಅನಂತರದ ಸ್ಥಾನದಲ್ಲಿ ರುವ ಅಮೆರಿಕ, ಇದೇ ಅವಧಿಯಲ್ಲಿ ಒಟ್ಟು 75,675 ಪೇಟೆಂಟ್‌ ಅರ್ಜಿಗಳನ್ನು ಸಲ್ಲಿಸಿತ್ತು. ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನದ ಈ ದಾಪುಗಾಲು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಎಐ ಬಳಕೆ
ದೂರಸಂಪರ್ಕ, ಸಾರಿಗೆ ಹಾಗೂ ಜೈವಿಕ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರಗಳಲ್ಲಿ ಈ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಒಟ್ಟು ಪೇಟೆಂಟ್‌ ಅರ್ಜಿಗಳಲ್ಲಿ ತಲಾ ಶೇ. 15ರಷ್ಟು ಅರ್ಜಿಗಳನ್ನು ದೂರಸಂಪರ್ಕ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಸಲ್ಲಿಸಲಾಗಿದೆ ಮತ್ತು ಶೇ. 12ರಷ್ಟು ಅರ್ಜಿಗಳು ಜೈವಿಕ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದವುಗಳಾಗಿವೆ.

l ಪ್ರತೀ 500 ಪೇಟೆಂಟ್‌ ಅರ್ಜಿಗಳಲ್ಲಿ 333 ಅರ್ಜಿಗಳು ವಿವಿಧ ಕಂಪೆನಿಗಳಿಂದ ಸಲ್ಲಿಕೆಯಾದರೆ, 167 ಅರ್ಜಿಗಳು ವಿಶ್ವವಿದ್ಯಾ ನಿಲಯಗಳು ಮತ್ತು ಸಾರ್ವಜನಿಕ ಅಧ್ಯಯನ ಕೇಂದ್ರಗಳಿಂದ ಸಲ್ಲಿಕೆಯಾಗಿವೆ.
l ವಿವಿಧ ಕಂಪೆನಿಗಳಿಂದ ಸಲ್ಲಿಕೆಯಾದ 333 ಅರ್ಜಿ ಗಳಲ್ಲಿ 109 ಅರ್ಜಿಗಳು ಅಮೆರಿಕ ಮೂಲದ್ದಾಗಿವೆ.
l ವಿಶ್ವವಿದ್ಯಾನಿಲಯಗಳು ಮತ್ತು ಸಾರ್ವಜನಿಕ ಅಧ್ಯಯನ ಕೇಂದ್ರಗಳು ಸಲ್ಲಿಸಿದ 167 ಅರ್ಜಿಗಳಲ್ಲಿ 110 ಅರ್ಜಿಗಳು ಚೀನಕ್ಕೆ ಸೇರಿವೆ.

ಡ್ರ್ಯಾಗನ್‌ ರಾಷ್ಟ್ರದ ನಾಗಾಲೋಟ
ಚೀನವು ವಿಶ್ವದ ಅರ್ಥವ್ಯವಸ್ಥೆಗಳ ಪೈಕಿ ಉನ್ನತ ಸ್ಥಾನಕ್ಕೇರಲು ಹರಸಾಹಸ ಪಡುತ್ತಿರುವು ದಂತೂ ಸತ್ಯ. ಇದಕ್ಕೆ ಪುಷ್ಟಿ ನೀಡುವಂತೆ, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯು “ಬ್ಲೂಮ್‌ಬರ್ಗ್‌ ನ್ಯೂಸ್‌’ಗೆ ನೀಡಿದ ವರದಿಯ ಪ್ರಕಾರ, 2022ರಲ್ಲಿ 29,853 ಎ.ಐ. ಸಂಬಂಧಿತ ಪೇಟೆಂಟ್‌ ಅರ್ಜಿಗಳನ್ನು ಸಲ್ಲಿಸಿದೆ. ಇದು ಅಮೆರಿಕ ಸಲ್ಲಿಸಿದ ಎಐ ಸಂಬಂಧಿತ ಪೇಟೆಂಟ್‌ ಅರ್ಜಿಗಳಿಗಿಂತ ಶೇ. 80ರಷ್ಟು ಅಧಿಕ. ಆದರೆ ಅಮೆರಿಕ ಈ ಹಿಂದಿಗಿಂತ ಶೇ.5.5 ಕಡಿಮೆಯಾಗಿರುವುದು ಒಂದಿಷ್ಟು ಅಚ್ಚರಿಗೆ ಕಾರಣ ವಾಗಿದೆ. ಚೀನವು ವಿಶ್ವಾದ್ಯಂತ ಕಳೆದ ವರ್ಷ ಎಐ ಸಂಬಂಧಿತ ಪೇಟೆಂಟ್‌ ಅರ್ಜಿಗಳನ್ನು ಸಲ್ಲಿಸಿದ ದೇಶಗಳ ಪೈಕಿ ಶೇ. 40ರಷ್ಟು ಪಾಲನ್ನು ಹೊಂದಿದೆ.

Advertisement

ಚೀನಕ್ಕಿಂತ ಅನಂತರದ ಸ್ಥಾನಗಳಲ್ಲಿರುವ ಜಪಾನ್‌ ಮತ್ತು ದಕ್ಷಿಣ ಕೊರಿಯಾ ಎರಡು ದೇಶಗಳು ಒಟ್ಟಾರೆ ಸಲ್ಲಿಸಿದ ಅರ್ಜಿಗಳ ಒಟ್ಟು ಸಂಖ್ಯೆ 16,700. ಎಐ ಪೇಟೆಂಟ್‌ ಅರ್ಜಿ ಸಲ್ಲಿಕೆ ಯಲ್ಲಿ ಚೀನ ಹಾಗೂ ಉಳಿದ ದೇಶಗಳನ್ನು ತುಲನೆ ಮಾಡಿ ದಾಗ ಎಐ ತಂತ್ರಜ್ಞಾನ ಸಂಶೋಧನೆಯಲ್ಲಿ ಚೀನ ದಾಪುಗಾಲಿಟ್ಟಿ ರುವುದು ಸಾಬೀತಾಗುತ್ತದೆ. ಜತೆಗೆ ಈ ವಿದ್ಯಮಾನವು ಚಿಪ್‌ ತಯಾರಿಕೆ, ಬಾಹ್ಯಾಕಾಶ ಪರಿಶೋಧನೆ ಹಾಗೂ ಮಿಲಿಟರಿ ಸಂಬಂಧಿತ ವಿಜ್ಞಾನದ ಬಗೆಗೆ ಚೀನದ ಕಂಪೆನಿಗಳು ನಡೆಸುತ್ತಿರುವ ಸಂಶೋ ಧನೆಗಳಿಗೂ ಸ್ಫೂರ್ತಿಯಾಗಿವೆ. ಇಷ್ಟೇ ಅಲ್ಲದೆ, ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆದೇಶದಂತೆ ಚೀನವು ಅಮೆರಿಕವನ್ನು ಹಿಂದಿಕ್ಕಲು ಬೇಕಾದ ಅಗತ್ಯ ಸಂಶೋಧನೆಗಳ ಬಗ್ಗೆ ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ಸ್ಥೂಲ ಅಧ್ಯಯನ ನಡೆಸಲು ದೇಶದ ತಂತ್ರಜ್ಞಾನಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಎಐ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್‌ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನದ ಕಂಪೆನಿಗಳಿಗೆ ಭಾರೀ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಹರಿದು ಬರತೊಡಗಿದೆ.

ಆತಂಕ ಯಾಕೆ?
ಕಳೆದ ಕೆಲವು ದಶಕಗಳಿಂದೀಚೆಗೆ ಚೀನ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡುವ ಮೂಲಕ ವಿಶ್ವದಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕೊಳ್ಳುವ ಪ್ರಯತ್ನ ನಡೆಸುತ್ತಲೇ ಬಂದಿವೆ. ಇದಕ್ಕೆ ಎಐ ತಂತ್ರಜ್ಞಾನವೂ ಹೊರತಾಗಿಲ್ಲ. ಹೀಗಾಗಿಯೇ ಎಐ ಸಂಬಂಧಿತ ಸಂಶೋಧನೆಯಲ್ಲಿ ಚೀನ ಹೆಚ್ಚಿನ ಯಶಸ್ಸನ್ನು ಕಾಣಲು ಸಾಧ್ಯವಾಗಿದೆ. ಆದರೆ ಚೀನ ಎಐ ತಂತ್ರಜ್ಞಾನದ ಮೇಲೆ ಹೊಂದಿರುವ ಹಿಡಿತ ಮತ್ತು ಇಡೀ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ಅದು ನಡೆಸುತ್ತಿರುವ ಸಂಶೋಧನೆಗಳು, ಅದರ ಫ‌ಲಿತಾಂಶಗಳು ವಿಶ್ವದ ಇತರ ರಾಷ್ಟ್ರ ಗಳಿಗೆ ಆತಂಕಕಾರಿ ಬೆಳವಣಿಗೆಯಾಗಿದೆ. ಯಾವೊಂದೂ ಕ್ಷೇತ್ರದಲ್ಲೂ ಚೀನ ಹಿಡಿತ ಸಾಧಿಸಿದರೂ ಅದು ಅದನ್ನು ತನ್ನ ಪ್ರತಿಸ್ಪರ್ಧಿಗಳನ್ನು ಹಣಿಯಲು ಆ ಯಶಸ್ಸನ್ನು ಬಳಸಿಕೊಳ್ಳುತ್ತದೆ. ಅಷ್ಟು ಮಾತ್ರವಲ್ಲದೆ ಈ ಸಾಧನೆಯನ್ನು ವಿಶ್ವ ರಾಷ್ಟ್ರಗಳ ಮೇಲೆ ಸವಾರಿ ನಡೆಸಲು ಒಂದು ಅಸ್ತ್ರವನ್ನಾಗಿ ಬಳಕೆ ಮಾಡುವುದು ಅದರ ತಂತ್ರಗಾರಿಕೆಯ ಭಾಗ ವಾಗಿರುವುದರಿಂದ ಚೀನದ ಈ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಅಮೆರಿಕ ಸಹಿತ ವಿಶ್ವ ರಾಷ್ಟ್ರಗಳು ಶತಪ್ರಯತ್ನ ನಡೆಸುತ್ತಿವೆ.

ಜಾಗತಿಕ ಪೈಪೋಟಿಗೆ ಸಾಕ್ಷಿಯಾಗಲಿದೆ 2024!
ಇಂದು ಎಐ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ರಕ್ಷಣೆ, ಆರೋಗ್ಯ, ವಾಣಿಜ್ಯೋದ್ಯಮ ಆದಿಯಾಗಿ ಬಹುತೇಕ ವಲಯಗಳಲ್ಲಿ ಎಐ ತಂತ್ರಜ್ಞಾನವನ್ನು ವಿವಿಧ ದೇಶಗಳು ಹಂತಹಂತವಾಗಿ ಬಳಸಲಾರಂಭಿಸಿವೆ. ಅಭೂತಪೂರ್ವ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿರುವ ಎಐ ತಂತ್ರಜ್ಞಾನವು ಇಡೀ ವಿಶ್ವವನ್ನೇ ತನ್ನ ಕೈಗೊಂಬೆಯಾಗಿಸಿದರೂ ಅಚ್ಚರಿಯೇನಿಲ್ಲ. ಈ ಕ್ಷೇತ್ರದಲ್ಲಿನ ಸಂಶೋಧನೆ, ಆವಿಷ್ಕಾರಗಳಿಗೆ ಚೀನ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ಹೀಗಾಗಿಯೇ ಅಮೆರಿಕ ಎಐ ತಂತ್ರಜ್ಞಾನ ಕ್ಷೇತ್ರದಲ್ಲಿನ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿದೆ. ಮುಂದಿನ ವರ್ಷ ಅಂದರೆ 2024, ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಕಾರಿ ಆವಿಷ್ಕಾರಗಳಿಗೆ ಸಾಕ್ಷಿಯಾಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರೀ ಪೈಪೋಟಿಯನ್ನು ನಿರೀಕ್ಷಿಸಬಹುದು.

2020ರ ವರೆಗೆ ಸಲ್ಲಿಸಲಾದ ಪೇಟೆಂಟ್‌ ಅರ್ಜಿಗಳು ಮತ್ತು ಒಪ್ಪಿಗೆ ನೀಡಲಾದ ಪೇಟೆಂಟ್‌ಗಳು
ದೇಶ -ಸಲ್ಲಿಕೆಯಾದ ಪೇಟೆಂಟ್‌ ಅರ್ಜಿಗಳು- ಒಪ್ಪಿಗೆ ಲಭಿಸಿದ ಅರ್ಜಿಗಳು
ಚೀನ 1,69,938  68,255
ಅಮೆರಿಕ 75,675   45,379
ದ.ಕೊರಿಯಾ 24,722   15,224
ಜಪಾನ್‌ 17,073   8,977
ಜರ್ಮನಿ 3,770   1,343
ಕೆನಡಾ 3,170   1,619
ಯು.ಕೆ. 1,999   848
ತೈವಾನ್‌ 1,059   443
ಭಾರತ 982   613
ಸಿಂಗಾಪುರ 672   355
ರಷ್ಯಾ 562   317
ಮೆಕ್ಸಿಕೋ 313   234
ಇಟಲಿ 206   72
ಇಸ್ರೇಲ್‌ 122   48

 ಅವನೀಶ್‌ ಭಟ್‌, ಸವಣೂರು

Advertisement

Udayavani is now on Telegram. Click here to join our channel and stay updated with the latest news.

Next