Advertisement
ನಗರದ ಎಂ.ಜಿ. ರಸ್ತೆಯಲ್ಲಿನ ನಮ್ಮ ಮೆಟ್ರೋ ರಂಗೋಲಿ ಕೇಂದ್ರದಲ್ಲಿ ಭಾನುವಾರ ಜಗದ್ಗುರು ತೋಂಟದಾರ್ಯ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಏರ್ಪಡಿಸಿದ್ದ “ಗಣಿಗಾರಿಕೆಗೆ ಬಲಿಯಾಯ್ತಾ ಕಪ್ಪತ್ತಗುಡ್ಡ’ ಕುರಿತು ಸುಧೀರ್ ಶೆಟ್ಟಿ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ, ಜೀವವೈವಿಧ್ಯತೆಯಿಂದ ಕೂಡಿದ ಕಪ್ಪತ್ತಗುಡ್ಡದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
Related Articles
Advertisement
ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಮಾತನಾಡಿ, ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುವುದರಿಂದ ಪರಿಸರಕ್ಕೆ ಮಾತ್ರವಲ್ಲ; ಸ್ಥಳೀಯ ಜನಜೀವನಕ್ಕೂ ಧಕ್ಕೆ ಉಂಟಾಗಲಿದೆ. ಇದು ಕೇವಲ ಆ ಭಾಗದ ಜನರ ಹೋರಾಟ ಆಗಬಾರದು. ಇದರಲ್ಲಿ ರಾಜ್ಯದ ಎಲ್ಲ ಭಾಗದ ಜನರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆಗಳು ನಡೆಯಬಾರದು ಎಂಬ ನಿಯಮಗಳಿದ್ದರೂ, ಸರ್ಕಾರದಲ್ಲಿ ಇರುವವರೇ ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮನುಷ್ಯನ ದುರಾಸೆ ಎಷ್ಟಿದೆ ಎಂಬುದು ಕಪ್ಪತ್ತಗುಡ್ಡದಲ್ಲಿ ನಡೆಯುತ್ತಿರುವ ಪರಿಸರ ನಾಶದ ಚಿತ್ರಗಳಿಂದ ಗೊತ್ತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರವಾದಿ ಯಲ್ಲಪ್ಪರೆಡ್ಡಿ ಮಾತನಾಡಿ, ಕಪ್ಪತ್ತಗುಡ್ಡ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಪರಿಸರವಾದಿ ಸುರೇಶ್ ಹೆಬ್ಳೀಕರ್, ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಛಾಯಾಗ್ರಾಹಕ ಸುಧೀರ್ ಶೆಟ್ಟಿ ಮಾತನಾಡಿದರು.