ಅಹ್ಮದಾಬಾದ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ಗುರುವಾರ ಪ್ರವಾಸಿ ನ್ಯೂಜಿಲ್ಯಾಂಡ್ ವನಿತೆಯರ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 59 ರನ್ನುಗಳ ಗೆಲುವು ದಾಖಲಿಸಿದೆ.
ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಅ. 27ರಂದು ಅಹ್ಮದಾಬಾದ್‌ನಲ್ಲಿಯೇ ನಡೆಯಲಿದೆ.
ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ಕೈಯಲ್ಲಿ ಸೋತು ಸೆಮಿಫೈನಲಿಗೇರಲು ವಿಫಲವಾಗಿದ್ದ ಭಾರತ ತಂಡವು ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿ ತಿರುಗೇಟು ನೀಡಲು ಯಶಸ್ವಿಯಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಕೆರ್ರ ಸಹೋದರಿಯರ ಬಿಗು ದಾಳಿಯ ಹೊರತಾಗಿಯೂ ದೀಪ್ತಿ ಶರ್ಮ, ತೇಜಲ್ ಹಬಬ್ನೀಸ್ ಮತ್ತು ಜೆಮಿಮಾ ರಾಡ್ರಿಗಸ್ ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ 44.3 ಓವರ್‌ಗಳಲ್ಲಿ 227 ರನ್ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ನ್ಯೂಜಿಲ್ಯಾಂಡ್ 40.4 ಓವರ್‌ಗಳಲ್ಲಿ 168 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಬ್ರೂಕ್ ಹಾಲಿಡೇ 39 ಮತ್ತು ಮ್ಯಾಡಿ 31 ರನ್ ಹೊಡೆದರು.
ಈ ಮೊದಲು ತೇಜಲ್ ಮತ್ತು ರಾಡ್ರಿಗಸ್ ಐದನೇ ವಿಕೆಟಿಗೆ 61 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತ ತಂಡವನ್ನು ಆಧರಿಸಿದ್ದರು. ತೇಜಲ್ 42 ಮತ್ತು ರಾಡ್ರಿಗಸ್ 35 ರನ್ ಗಳಿಸದ್ದರು. ಈ ಮೊದಲು ದೀಪ್ತಿ ಶರ್ಮ 41 ರನ್ ಹೊಡೆದಿದ್ದರು. ಅಮೇಲಿಯಾ ಕೆರ್ರ 42 ರನ್ನಿಗೆ 4 ವಿಕೆಟ್ ಪಡೆದರೆ ಜೆಸ್ಸ್ ಕೆರ್ರ 49 ರನ್ನಿಗೆ ಮೂರು ವಿಕೆಟ್ ಕಿತ್ತರು.