Advertisement

ಅಹ್ಮದಾಬಾದ್‌ ಸ್ಫೋಟ ಪ್ರಕರಣ: ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ ಇಬ್ಬರು ಮಂಗಳೂರಿನವರು

01:11 AM Feb 20, 2022 | Team Udayavani |

ಮಂಗಳೂರು: ಅಹಮ್ಮದಾ ಬಾದ್‌ನಲ್ಲಿ 2008ರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆಗೆ ಒಳಗಾಗಿರುವ 38 ಆರೋಪಿ ಗಳ ಪೈಕಿ ಮೂವರು ಕರ್ನಾಟಕ ದವರಾಗಿದ್ದು, ಇಬ್ಬರು ಮಂಗಳೂರಿನವರು.

Advertisement

ಮಂಗಳೂರಿನ ಪಾಂಡೇಶ್ವರ ಬಳಿಯ ಸುಭಾಸ್‌ನಗರದ ಸೈಯದ್‌ ಮೊಹಮದ್‌ ನೌಶಾದ್‌ (30), ಹಳೆಯಂಗಡಿಯ ಅಹ್ಮದ್‌ ಬಾವಾ ಅಬೂಬಕರ್‌ (38) ಹಾಗೂ ವಿಜಯಪುರದ ಮಹಮದ್‌ ಅದ್ನಾನ್‌ ಶಿಕ್ಷೆಗೊಳಗಾದವರು.

ಸೈಯದ್‌ನಿಗೆ ಜೀವನ ಪರ್ಯಂತ ಜೈಲು ಹಾಗೂ ಅಹ್ಮದ್‌ ಬಾವಾ ಮತ್ತು ಮಹಮದ್‌ಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಈ ಆರೋಪಿಗಳು ಉಡುಪಿಯಿಂದ ಸ್ಫೋಟಕ ಖರೀದಿಸಿ ಅದನ್ನು ಗುಜರಾತಿನ ಸೂರತ್‌ಗೆ ಕೊಂಡೊಯ್ದು ಅಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದುಕೊಂಡು ಬಾಂಬ್‌ ತಯಾರಿಸಿದ್ದರು. ಬಳಿಕ ಇದನ್ನು ಸೂರತ್‌ ಮತ್ತು ಅಹ್ಮದಾಬಾದ್‌ನ ವಿವಿಧೆಡೆಗಳಲ್ಲಿ ಇರಿಸಿ ಅಲ್ಲಿಂದ ರೈಲು ಹತ್ತಿ ಪೂನಾ ಕಡೆಗೆ ಪ್ರಯಾಣಿಸಿದ್ದರು. ಅರ್ಧ ದಾರಿಗೆ ತಲುಪಿದಾಗ ಅಹ್ಮದಾಬಾದ್‌ನಲ್ಲಿ ಬಾಂಬ್‌ ಸ್ಫೋಟ ಆಗಿರುವ ಮಾಹಿತಿ ಲಭಿಸಿತ್ತು. ಸೂರತ್‌ನಲ್ಲಿರಿಸಿದ್ದ ಬಾಂಬ್‌ಗೆ ಸರ್ಕ್ಯೂಟ್ ಜೋಡಣೆ ಸರಿಯಾಗದೆ ಸ್ಫೋಟಿಸಿರಲಿಲ್ಲ.

ಕಾರಿನಿಂದ ಮಾಹಿತಿ ಲಭ್ಯ
ಬಾಂಬ್‌ ಸ್ಫೋಟದ ಸುದ್ದಿ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದಾಗ ಆರೋಪಿಗಳು ತ್ಯಜಿಸಿದ್ದ ಕಾರಿನಿಂದ ಮಾಹಿತಿ ಲಭಿಸಿತ್ತು. ಸೂರತ್‌ನಲ್ಲಿ ಈ ಆರೋಪಿಗಳು ತಂಗಿದ್ದ ಬಾಡಿಗೆ ಮನೆಯ ಮಾಲಕರು ಕಾರಿನ ಗುರುತು ಹಚ್ಚಿ, ತನ್ನ ಬಾಡಿಗೆ ಮನೆಯಲ್ಲಿ ಇದ್ದವರದ್ದು ಎಂದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿಗಳು ಬಾಡಿಗೆ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದರು. ಪೊಲೀಸರನ್ನು ಕರೆಸಿ ಬಾಗಿಲು ತೆಗೆಸಿದಾಗ ಬಾಂಬ್‌ ತಯಾರಿಕೆಯ ವಸ್ತುಗಳು ಲಭಿಸಿದ್ದವು. ಅಲ್ಲಿದ್ದ ಕಾರನ್ನು ಪರಿಶೀಲಿಸಿದಾಗ ಅದು ಮುಂಬಯಿಯಿಂದ ಕದ್ದು ತಂದ ಕಾರು ಎಂಬ ಮಾಹಿತಿ ಲಭಿಸಿತ್ತು.

Advertisement

ಉಳ್ಳಾಲದಲ್ಲಿ ಅಡಗಿದ್ದರು
ಇಸ್ಮಾಯಿಲ್‌ ಚೌಧುರಿ ಎಂಬಾತ ಕಾರನ್ನು ಕದ್ದು ತಂದಿದ್ದು, ಆತ ರಿಯಾಝ್ ಭಟ್ಕಳ್‌ನಿಗೆ ನೀಡಿದ್ದು ಗೊತ್ತಾಗಿತ್ತು. ರಿಯಾಜ್‌ ಮಂಗಳೂರಿನಲ್ಲಿ ಅಡಗಿದ್ದ ಮಾಹಿತಿಯೂ ಪೊಲೀಸರಿಗೆ ಸಿಕ್ಕಿತ್ತು.

ಮಹಾರಾಷ್ಟ್ರ ಪೊಲೀಸರು ಮಂಗಳೂರಿಗೆ ಬಂದು ಶೋಧ ನಡೆಸಿದಾಗ ಉಳ್ಳಾಲದಲ್ಲಿ ರಿಯಾಜ್‌ ಅಡಗಿರುವುದು ಗೊತ್ತಾಗಿತ್ತು.

2008ರ ಅ. 3ರ ಮುಂಜಾನೆ 2.45 ರಿಂದ 10 ಗಂಟೆ ತನಕ ಉಳ್ಳಾಲದ ಮುಕ್ಕಚ್ಚೇರಿ, ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮತ್ತು ಬಳಿಕ ಪಾಂಡೇಶ್ವರದ ಸುಭಾಸ್‌ನಗರ ಹಾಗೂ ಇತರ ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಅಂದು ಮುಕ್ಕಚ್ಚೇರಿಯ ಮಹಮ್ಮದ್‌ ಅಲಿ, ಜಾವೇದ್‌ ಅಲಿ, ಸುಭಾಸ್‌ನಗರದ ನೌಶಾದ್‌ ಮತ್ತು ಹಳೆಯಂಡಿಯ ಅಹ್ಮದ್‌ ಬಾವಾನನ್ನು ಬಂಧಿಸಿದ್ದರು. ಅನಂತರದ ದಿನಗಳಲ್ಲಿ ಪಡುಬಿದ್ರೆಯ ಉಚ್ಚಿಲ ಮತ್ತು ಚಿಕ್ಕಮಗಳೂರಿನಲ್ಲಿ ಹಾಗೂ ಗುಜರಾತ್‌, ಮಹಾರಾಷ್ಟ್ರಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ 6 ಮಂದಿಯನ್ನು ಬಂಧಿಸಿದ್ದರು.

ದಾಳಿ ಕಾರ್ಯಾಚರಣೆ ವೇಳೆ ಮಹ ಮ್ಮದ್‌ ಅಲಿ, ಆತನ ಪುತ್ರ ಜಾವೇದ್‌ ಅಲಿ, ನೌಶಾದ್‌ ಮತ್ತು ಅಹ್ಮದ್‌ ಬಾವಾ ಅವರಿಂದ 5 ಬಾಂಬ್‌, 11.39 ಲಕ್ಷ ರೂ. ನಗದು, ಗುಜರಾತ್‌ನ ನಕ್ಷೆ, 21 ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ ಗಳು, ಜೆಹಾದಿ ಸಾಹಿತ್ಯ, ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್, 4 ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಪೊಲೀಸರು ವಶ ಪಡಿಸಿಕೊಡಿದ್ದರು.

2017ರ ಎಪ್ರಿಲ್‌ 12 ರಂದು ಸೈಯದ್‌ ಮೊಹಮದ್‌ ನೌಶಾದ್‌, ಅಹ್ಮದ್‌ ಬಾವಾ ಅಬೂಬಕರ್‌ ಮತ್ತು ಪಡುಬಿದ್ರೆಯ ಇನ್ನೋರ್ವ ಆರೋಪಿ ಸಹಿತ ಮೂವರಿಗೆ ಮಂಗಳೂರಿನ ನ್ಯಾಯಾಲಯವು ಕಠಿನ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ಆರೋಪಿಗಳನ್ನು ಬಂಧಿಸಿದ ಸಂದರ್ಭ ಅವರು ಅಮಾಯಕರು ಎಂದು ಕೆಲವು ಮಂದಿ ಆಗ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಇನ್ಸ್‌ಪೆಕ್ಟರ್‌ ವೆಂಕಟೇಶ ಪ್ರಸನ್ನ ಅವರ ವಿರುದ್ಧ ಆರೋಪ ಮಾಡಿ ರಾಷ್ಟ್ರಪತಿ ಮತ್ತು ಪ್ರಧಾನಿ ತನಕವೂ ದೂರು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next