Advertisement

ಅಹ್ಮದಾಬಾದ್‌-ಮುಂಬಯಿ ಬುಲೆಟ್‌ ಯೋಜನೆಗೆ ಚಾಲನೆ

06:35 AM Sep 15, 2017 | Harsha Rao |

ಅಹಮದಾಬಾದ್‌: ದೇಶದ ರೈಲ್ವೇ ಭೂಪಟದಲ್ಲಿ ಹೊಸ ದಿಕ್ಸೂಚಿ ಬರೆಯಲಿರುವ ಕೇಂದ್ರ ಸರಕಾರದ ಬುಲೆಟ್‌ ಟ್ರೈನ್‌ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ ಭೂಮಿಪೂಜೆ ನೆರವೇರಿಸಿದ್ದಾರೆ. ಸಾಬರ್‌ಮತಿ ಆ್ಯತ್ಲೆಟಿಕ್ಸ್‌  ಸ್ಟೇಡಿಯಂನಲ್ಲಿ  ನಡೆದ ಸಮಾರಂಭದಲ್ಲಿ, ಸಹಸ್ರಾರು ಜನರ ಸಮ್ಮುಖದಲ್ಲಿ ಅಹಮದಾಬಾದ್‌-ಮುಂಬಯಿ ನಡುವಿನ ಪ್ರತಿಷ್ಠಿತ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಬುಲೆಟ್‌ ಟ್ರೈನ್‌ ವಿರೋಧಿಸಿದ್ದವರಿಗೆ ತಮ್ಮ ಮಾತಿನಲ್ಲೇ ತಿವಿದರು.

Advertisement

“ಜಪಾನ್‌ ಭಾರತದ ನಿಜವಾದ ಸ್ನೇಹಿತ. ದೇಶದ ಮಹತ್ವಾಕಾಂಕ್ಷಿ ಯೋಜನೆಗೆ ಜಪಾನ್‌ ಕೈಜೋಡಿಸಿದೆ. ಅಷ್ಟೇ ಅಲ್ಲ, 
ಬುಲೆಟ್‌ ಟ್ರೈನ್‌ ಭಾರತಕ್ಕೆ ಜಪಾನ್‌ ನೀಡುವ ದೊಡ್ಡ ಕೊಡುಗೆ ಕೂಡ ಹೌದು. ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಈ ಯೋಜನೆ ಬಗ್ಗೆ ಹೇಳಿದಾಗ, ಅನೇಕರು ಇದೆಲ್ಲ ಭಾರತದಂಥ ದೇಶದಲ್ಲಿ ಸಾಧ್ಯವೇ? ಎಂದಿದ್ದರು. ಈಗ ಯೋಜನೆ ಶಿಲಾನ್ಯಾಸ ಗೊಳ್ಳುತ್ತಿರುವುದನ್ನು ಕಂಡು, ಇದರಿಂದೇನು ಪ್ರಯೋಜನ? ಅಗತ್ಯ ಇತ್ತೇ? ಎಂದು ಪ್ರಶ್ನಿಸುತ್ತಿದ್ದಾರೆ’ ಎಂದು ಲಘು ಧಾಟಿಯಲ್ಲೇ ತಮ್ಮ ಟೀಕಾಕಾರರಿಗೆ ಉತ್ತರ ನೀಡಿದರು.

“ಶರವೇಗದ ಸಂಪರ್ಕ ಸಾಧನೆ ನಮ್ಮ ಮೇಲಿನ ಇಂದಿನ ಒತ್ತಡ. ವೇಗದ ಸುಧಾರೀಕರಣ ನಮ್ಮ ಎದುರು ಇರುವ ಅಗತ್ಯ ಕೂಡ. ದೂರ ಪ್ರಯಾಣದ ವೇಳೆ ಕಡಿಮೆ ಮಾಡಿಕೊಳ್ಳುವ ಹಾಗೂ ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಬುಲೆಟ್‌ ಟ್ರೈನ್‌ ಯೋಜನೆ ಸಹಕಾರಿ’ ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಇಂಡೋ-ಜಪಾನ್‌ ಸ್ನೇಹ ಸ್ಪೆಷಲ್‌: ಬಟನ್‌ ಒತ್ತುವ ಮೂಲಕ ಶಿಲಾನ್ಯಾಸ ನೆರವೇರಿಸಿದ ಜಪಾನ್‌ ಪ್ರಧಾನಿ ಶಿಂಜೋ ಅಬೆ ಮಾತನಾಡಿ, “ಭಾರತ ಹಾಗೂ ಜಪಾನ್‌ನ ಬಾಂಧವ್ಯ ವಿಶೇಷ, ರಾಜತಾಂತ್ರಿಕ ಹಾಗೂ ಜಾಗತಿಕ ಮಹತ್ವ ಪಡೆದುಕೊಂಡಿದೆ’ ಎಂದು ಹೇಳುವ ಮೂಲಕ ಚೀನ ಸಹಿತ ಉಳಿದ ನೆರೆ ರಾಷ್ಟ್ರಗಳಿಗೆ ಪರೋಕ್ಷವಾಗಿಯೇ ಸಂದೇಶ ರವಾನಿಸಿದರು.

“”ಭಾರತದ ಬಲವೃದ್ಧಿಯೇ ಜಪಾನ್‌ನ ಆಸಕ್ತಿ. ಜಪಾನ್‌ನ ಬಲವೃದ್ಧಿಯೇ ಭಾರತದ ಆಸಕ್ತಿ” ಎಂದು ಹೇಳಿದ ಶಿಂಜೋ, “”ನನ್ನ ಒಳ್ಳೆಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಇರುವ ಒಬ್ಬ ಉತ್ತಮ ನಾಯಕ. ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿ ಬುಲೆಟ್‌ ಟ್ರೈನ್‌ ಯೋಜನೆ ಬಗ್ಗೆ ಅವರು ಮಹತ್ವದ ನಿರ್ಧಾರ ತೆಗೆದುಕೊಂಡರು. ಈ ಮೂಲಕ ಹೊಸ ಭಾರತ ಕಟ್ಟುವ ಕನಸು ಕಂಡರು. ಅದನ್ನಿಂದು ನನಸಾಗಿಸುವ ಪಯತ್ನದಲ್ಲಿದ್ದಾರೆ” ಎಂದರು.

Advertisement

ಐದು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬುಲೆಟ್‌ ಟ್ರೈನ್‌ ನಲ್ಲಿಯೇ ಭಾರತದ ನಿಸರ್ಗ ಸೌಂದರ್ಯವನ್ನು ನೋಡಲು ಇಷ್ಟಪಡುವುದಾಗಿ ಹೇಳಿದರು.

ಶಿಂಜೋ “ಜೈ’ಕಾರ
ತಮ್ಮ ಮಾತಿನ ಮಧ್ಯೆ ಸ್ನೇಹಿತ ಮೋದಿಜೀಗೆ ಜೈಕಾರ ಹಾಕಿದ ಶಿಂಜೋ ಅಬೆ ಅವರು ಪ್ರಧಾನಿ ಮೋದಿ ಅವರ ಸ್ಟೈಲ್‌ನಲ್ಲೇ ಪ್ರಾಸ ಪದಗಳ ಜೋಡಣೆಯೊಂದಿಗೆ ಗಮನ ಸೆಳೆದರು. ಮೋದಿಜೀಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ ಅವರು, ಜಪಾನ್‌ ಪದದಲ್ಲಿನ “ಜ’ ಹಾಗೂ ಇಂಡಿಯಾ ಪದದಲ್ಲಿನ “ಐ’ ಸೇರಿಯೇ “ಜೈ’ ಪದ ಹುಟ್ಟುಕೊಂಡಿದೆ. ಹಿಂದಿಯಲ್ಲಿ ಇದರರ್ಥ ಗೆಲುವು ಎಂದಾಗಿದೆ ಎಂದು ಹೇಳಿದರು.

ಮೋದಿ “ಬುಲೆಟ್‌’ ಮಾತು
ವಿಪಕ್ಷ ನಾಯಕರ ಟೀಕೆ, ವಿರೋಧಕ್ಕೆ ತಮ್ಮ ಎಂದಿನ ಚಟಾಕಿ ಮಾತುಗಳ ಮೂಲಕವೇ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, “”ಜಪಾನ್‌ 1964ರಲ್ಲಿಯೇ ಬುಲೆಟ್‌ ಟ್ರೈನ್‌ ಯೋಜನೆಗೆ ಚಾಲನೆ ನೀಡಿತ್ತು. ಇಂದು ವಿಶ್ವದ 15 ರಾಷ್ಟ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬುಲೆಟ್‌ ಟ್ರೈನ್‌ ಕಾರ್ಯನಿರ್ವಹಿಸುತ್ತಿದೆ. ಯುರೋಪ್‌-ಚೀನಾ ನಡುವಿನ ಬುಲೆಟ್‌ ಟ್ರೈನ್‌ ಯೋಜನೆಯ ಚಿತ್ರಣ ಎಲ್ಲೆಡೆಯೂ ಕಣ್ಣಮುಂದೆ ನಿಲ್ಲುತ್ತದೆ. ಕೇವಲ ಆರ್ಥಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕವಾಗಿಯೂ ಇದರಿಂದ ಸಾಕಷ್ಟು ಬದಲಾವಣೆಗಳು ಸಾಧ್ಯವಾಗಿವೆ” ಎಂದು ಉದಾಹರಿಸಿದರು.

ಇದೇ ವೇಳೆ, ಅಹಮದಾಬಾದ್‌ – ಮುಂಬಯಿ ನಡುವಿನ ಬುಲೆಟ್‌ ಟ್ರೈನ್‌ ಯೋಜನೆ ಕಾಮಗಾರಿ 2022ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಿದ್ದೇವೆ. ಇದರಿಂದ 500 ಕಿ.ಮೀ. ದೂರವನ್ನು ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ ಎಂದ ಪ್ರಧಾನಿ ಮೋದಿ, ಭಾರತೀಯ ರೈಲ್ವೇ ಹಾಗೂ ಜಪಾನ್‌ನ ಶಿಂಕನ್ಸೆನ್‌ ಟೆಕ್ನಾಲಜಿ ಜಂಟಿಯಾಗಿ ಈ ಯೋಜನೆಯ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.

ಜಪಾನ್‌ನಲ್ಲಿರುವಂತೆ, ಭಾರತದಲ್ಲಿ ನಿರ್ಮಾಣಗೊಳ್ಳಲಿರುವ ಬುಲೆಟ್‌ ಟ್ರೈನ್‌ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರಲಿದೆ. ವಿಶ್ವ ಮಹಾಯುದ್ಧದ ಅನಂತರವೇ ಜಪಾನ್‌ ಆರ್ಥಿಕ, ಸಾಮಾ ಜಿಕ ಸಹಿತ ನಾನಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಶೇ. 10 ಜಿಡಿಪಿ ಹೊಂದಿದೆ.
– ಶಿಂಜೋ ಅಬೆ, ಜಪಾನ್‌ ಪ್ರಧಾನಿ

ಭಾರತ ಈ ಯೋಜನೆ ಮೂಲಕ ವಿಶ್ವದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ, ಅಭಿವೃದ್ಧಿ ಸಾಧಿಸಲಿದೆ. ದೊಡ್ಡ ಕನಸಿಲ್ಲದೆ, ಯಾವ ದೇಶವೂ ಉತ್ತಮ ಪ್ರಗತಿ ಕಾಣಲು ಸಾಧ್ಯವಿಲ್ಲ. ಕನಸು ದೊಡ್ಡದಾಗಿ ಇದ್ದಾಗಲೇ ದೇಶ ಉತ್ತಮ ಅಭಿವೃದ್ಧಿ ಕಾಣಲು ಸಾಧ್ಯವಾಗಲಿದೆ.
-ನರೇಂದ್ರ ಮೋದಿ, ಪ್ರಧಾನ ಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next