Advertisement

ಗುಜರಾತ್‌ನಲ್ಲೊಬ್ಬ ಅಪೂರ್ವ ಗೋವು ಪ್ರೇಮಿ 

10:55 AM Oct 20, 2017 | Team Udayavani |

ಅಹ್ಮದಾಬಾದ್‌: “ನಾನೊಬ್ಬ, ಜತೆಗಿರುವ ಸಾವಿರಾರು ಪ್ರಾಣಿಗಳೇ ನನ್ನ ಕುಟುಂಬ ಸದಸ್ಯರು. ದಿನದ 24 ಗಂಟೆಗಳನ್ನೂ ಅದರೊಟ್ಟಿಗೇ ಕಳೆಯೋದು. ಅದುವೇ ನನ್ನ ಪಾಲಿನ ಸ್ವರ್ಗ’ ಇಂಥದ್ದೊಂದು ಬದುಕು ಸಾಗಿಸೋದು ಕಷ್ಟಸಾಧ್ಯ. ಆದರೆ ಇಲ್ಲಿದ್ದಾರೆ ನೋಡಿ, ಸದಾಕಾಲ ಗೋವುಗಳ ಜತೆಯಲ್ಲೆ ಊಟ, ತಿಂಡಿ, ಮಾತುಕತೆ, ಹರಟೆಯಲ್ಲಿ ತೊಡಗಿರುವ ವ್ಯಕ್ತಿ.

Advertisement

ಇದು ಗುಜರಾತ್‌ನ ಅಹ್ಮದಾಬಾದ್‌ ನಿವಾಸಿ 44ರ ಹರೆಯದ ವಿಜಯ್‌ ಪ್ರಸನ್ನ ಅವರ ಅಪರೂಪದ ದಿನಚರಿ. ಅಚ್ಚರಿ ವ್ಯಕ್ತವಾಗಲಿಕ್ಕೆ ಸಂಗತಿಗಳು ಇವಿಷ್ಟೇ ಅಲ್ಲ, ನಂಬಲಿಕ್ಕೂ ಅಸಾಧ್ಯವೆನಿಸುವ ಸತ್ಯಗಳು ಇನ್ನೂ ಇವೆ. ಗೋಮೂತ್ರ ಸೇವಿಸಿ 22 ದಿನಗಳನ್ನೇ ಕಳೆದಿರುವ ವಿಜಯ್‌ ಪ್ರಸನ್ನ ಅವರು, ಗೋಮಯದ ಪದಾರ್ಥಗಳನ್ನೆ ಆಹಾರವಾಗಿಸಿಕೊಂಡಿದ್ದಾರೆ. ಹಟ್ಟಿಯಲ್ಲಿರುವ ಹಸುಗಳಿಗೂ ಸ್ನಾನ ಮಾಡಿಸುತ್ತಲೇ ತಾವೂ ಸ್ನಾನ ಮುಗಿಸುತ್ತಾರೆ. ಟಿವಿಗಳನ್ನೂ ಗೋವುಗಳ ಜತೆಯಲ್ಲೇ ಕುಳಿತು ವೀಕ್ಷಿಸುತ್ತಾರೆ. ವಾಯುವಿಹಾರಕ್ಕೆ ಹೋಗುವಾಗಲೂ ಜತೆಗೆ ಒಂದೆರಡು ಗೋವುಗಳು ಸಾಥ್‌ ನೀಡುತ್ತವೆ. ರಾತ್ರಿ ಮಲಗುವಾಗಲೂ ಮಗ್ಗುಲಲ್ಲಿ ಮುದ್ದು ಮುದ್ದಾದ ಹಸುಕಂದಮ್ಮ ಎರಡು ತಿಂಗಳ “ಸರಸ್ವತಿ’ಯನ್ನು ಮಲಗಿಸಿಕೊಳ್ಳುತ್ತಾರೆ. ಒಟ್ಟಾರೆ ಗೋವುಗಳಿಲ್ಲದೇ ವಿಜಯ್‌ ಪ್ರಸನ್ನ ಇಲ್ಲ, ಎನ್ನುವಷ್ಟರ ಮಟ್ಟಿಗೆ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ.

ಅಹ್ಮದಾಬಾದ್‌ನಿಂದ ಅಂದಾಜು 4 ಮೈಲು ದೂರದಲ್ಲಿರುವ ಇವರು, ಕಳೆದ ವರ್ಷವಷ್ಟೇ ಅಂದಾಜು 18 ಲಕ್ಷ ರೂ. ಖರ್ಚು ಮಾಡಿ ತಮ್ಮ ಬಳಿ ಇರುವ ಪೂನಂ ಹೆಸರಿನ ಗೋವಿಗೆ ಮದುವೆ ಕೂಡ ಮಾಡಿಸಿದ್ದರು. ಮದುವೆ ಹೆಚ್ಚು ಕಡಿಮೆ 5,000 ಅತಿಥಿಗಳ ಸಮ್ಮುಖದಲ್ಲಿ ನಡೆಸಿದ್ದಾರೆ. ಪ್ರಸನ್ನ ಅವರ ಕುಟುಂಬದಲ್ಲಿ ಕೇವಲ ಹಸುಗಳಷ್ಟೇ ಅಲ್ಲ, 2 ಗೂಳಿ, 6 ನಾಯಿಗಳು ಸಹಿತ ಬರೋಬ್ಬರಿ 2,000 ಬೇರೆ ಬೇರೆ ಜಾತಿಯ ಪ್ರಾಣಿಗಳಿವೆ. ಗೋಶಾಲೆ ಪ್ರದೇಶದಲ್ಲಿ ನವಿಲು, ಇಲಿಗಳು, ಪಕ್ಷಿಗಳು, ಹಾವುಗಳೂ ಪ್ರಸನ್ನ ಅವರ ಪ್ರೀತಿಗೆ ಮನಸೋತು ಬದುಕು ಸಾಗಿಸುತ್ತಿವೆ.

ಹಸುಗಳೇ ಸರ್ವಸ್ವ, ಪಂಚಪ್ರಾಣ
ನನ್ನ ಮತ್ತು ಹಸುಗಳ ನಡುವಿನ ಪ್ರೀತಿ, ವಾತ್ಸಲ್ಯ, ಬಾಂಧವ್ಯ ವರ್ಣಿಸಲಿಕ್ಕೆ ಪದಗಳೇ ಇಲ್ಲ. ಬೇರೆ ಯಾರಿಂದಲೂ ಆ ಬಗ್ಗೆ ಮಾತನಾಡಲೂ ಸಾಧ್ಯವಿಲ್ಲ. ಅವುಗಳೊಂ ದಿಗಿರುವುದೇ ನನ್ನ ಸ್ವರ್ಗ. ನನ್ನ ಪಾಲಿಗೆ ಬೇರೆ ಜಗತ್ತೇ ಇಲ್ಲ. ನನ್ನ ಕಷ್ಟ-ಸುಖಗಳೆಲ್ಲವನ್ನೂ ಅವುಗಳೊಂದಿಗೆ ಹಂಚಿಕೊಳ್ಳುತ್ತೇನೆ. ಅದರಲ್ಲೂ ರಾಧಾ, ಪೂನಮ್‌, ಸರಸ್ವತಿ ನನ್ನ ಹೃದಯದಲ್ಲೇ ಮನೆ ಮಾಡಿಕೊಂಡಿವೆ. ಹಸುಗಳಿಂದಲೇ ನನ್ನ ಜೀವನ ಶೈಲಿಯೇ ಇಂದು ಬದಲಾಗಿದೆ.  ಆರಂಭದ ದಿನದಲ್ಲಿ ನನ್ನ ಮಡದಿ, ಮಕ್ಕಳು ಸಂಕೋಚ ಪಟ್ಟಿ ದ್ದರು. ಅವರಿಂದ ದೂರವಾಗಿ ಗೋವುಗಳೊಂದಿಗೂ ಬದುಕಿದ್ದೆ. ಆದರೀಗ ಅವರೂ ನನ್ನನ್ನು ಅರ್ಥಮಾಡಿಕೊಂಡು ಜತೆಗೇ ಜೀವಿಸುತ್ತಿದ್ದಾರೆ ಎನ್ನುತ್ತಾರೆ ವಿಜಯ್‌ ಪ್ರಸನ್ನ.

Advertisement

Udayavani is now on Telegram. Click here to join our channel and stay updated with the latest news.

Next