Advertisement
ಯುಪಿ ಮಾದರಿಯಲ್ಲಿ ಅಖಾಡಕ್ಕೆ ಬಿಜೆಪಿ ಸಜ್ಜುಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರನ್ನೊಳಗೊಂಡ ಹಿಂದೂಪರ ಮತಬ್ಯಾಂಕ್ ಸೃಷ್ಟಿಯೊಂದಿಗೆ ಅಲ್ಪಸಂಖ್ಯಾತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಮನ್ವಯತೆ ಯೊಂದಿಗೆ ಎದುರಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಒಮ್ಮತಕ್ಕೆ ಬಂದಿವೆ. ಎಲ್ಲಾ ಸಮುದಾಯಗಳನ್ನೊಳಗೊಂಡ ಹಿಂದೂಪರ ವೋಟ್‌ಬ್ಯಾಂಕ್ ಸೃಷ್ಟಿಸುವುದರೊಂದಿಗೆ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯತಂತ್ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಯಶ ಕಂಡಿದೆ. ಈ ಹಿನ್ನೆಲೆಯಲ್ಲಿ ಅದೇ
ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಬುಧವಾರ ಕೇಶವಕೃಪಾದಲ್ಲಿ ನಡೆದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಿಂದೂಪರ ಮತಗಳನ್ನು ಕ್ರೋಢೀಕರಿಸುವ ವಿಚಾರದಲ್ಲಿ ಆರ್‌ಎಸ್‌ಎಸ್ ನೆರವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ಬಗ್ಗೆಯೂ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
Related Articles
Advertisement
“ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ’ಗೆ ಸಿದ್ಧತೆ, ಮುಂದಿನ ತಿಂಗಳು ನಡೆಯಲಿರುವ “ಮಂಗಳೂರು ಚಲೋ’ ಹೋರಾಟ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಎರಡೂ ಕಡೆಯವರು ಸಮನ್ವಯದೊಂದಿಗೆ ಅನುಷ್ಠಾನಕ್ಕೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಜನಸಂಪರ್ಕ ಅಭಿಯಾನದ ವೇಳೆ ದಲಿತರ ಕೇರಿಗಳಿಗೆ ಭೇಟಿ ನೀಡಿ ಅವರ ಮನೆಗಳಲ್ಲಿ ಉಪಹಾರ ಸೇವಿಸಿದ್ದು ಮತ್ತು ಅದಕ್ಕೆ ಪ್ರತಿಯಾಗಿ ದಲಿತ ಕುಟುಂಬಗಳನ್ನು ತಮ್ಮ ಮನೆಗೆ ಕರೆಸಿ ಸಹಭೋಜನ ಮಾಡಿರುವ ಬಗ್ಗೆ ಆರ್‌ಎಸ್ ಎಸ್ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಸಭೆಯಲ್ಲಿ ಆರ್‌ಎಸ್‌ಎಸ್ ಮುಖಂಡರಾದ ಮುಕುಂದ್, ಸುಧೀರ್, ಗುರುಪ್ರಸಾದ್, ಶಂಕರಾನಂದ, ನರೇಂದ್ರ, ವಿ.ನಾಗರಾಜ…, ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕೈ ತಯಾರಿಬೆಂಗಳೂರು: ವಿಧಾನಸಭೆ ಚುನಾವಣೆಯ ಸಿದ್ಧತೆಯಲ್ಲಿರುವ ಆಡಳಿತ ಪಕ್ಷ ಕಾಂಗ್ರೆಸ್, ಡಿಸೆಂಬರ್‌ನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಬುಧವಾರ ಸಂಜೆ ನಡೆಸಿದ ಹಿಂದುಳಿದ ವರ್ಗಗಳ ಘಕಟದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ನೀಡಿರುವ ಯೋಜನೆಗಳು ಹಾಗೂ ದೇವರಾಜ್ ಅರಸು ಅವರು ಹಿಂದುಳಿದ ವರ್ಗಕ್ಕೆ ನೀಡಿರುವ ಕೊಡುಗೆಯನ್ನು ಜನರಿಗೆ ತಲುಪಿಸಲು ಈ ಬೃಹತ್ ಸಮಾವೇಶ ನಡೆಸಲಾಗುತ್ತಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಚುನಾವಣೆ ವರ್ಷವಾಗಿರುವುದರಿಂದ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸಬೇಕು. ಮುಂದಿನ ಆರು ತಿಂಗಳು ಹಿಂದುಳಿದ ವರ್ಗದ ಪದಾಧಿಕಾರಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಾತನಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಿಂದುಳಿದ ವರ್ಗದ ಪಾತ್ರ ಮಹತ್ವದ್ದಾಗಿದೆ. ದೇವರಾಜ್ ಅರಸು ಹಿಂದುಳಿದ ವರ್ಗದ ಧ್ವನಿಯಾಗಿದ್ದರು. ಅನೇಕ ಹಿಂದುಳಿದ ವರ್ಗದ ನಾಯಕರನ್ನು ಸೃಷ್ಟಿ ಮಾಡಿದ್ದಾರೆ. ಸಿದ್ದರಾಮಯ್ಯ ಕೂಡ ಹಿಂದುಳಿದ ವರ್ಗದಿಂದ ಬಂದು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುವ ಬೇರೆ ಪಕ್ಷದ ನಾಯಕರನ್ನು ಕರೆ ತರುವಂತೆ ಪರಮೇಶ್ವರ್ ಸೂಚಿಸಿದ್ದಾರೆ. ಕಾಂಗ್ರೆಸ್ ಚುನಾವಣಾ ರಣನೀತಿಗೆ ಬಿಜೆಪಿ ಬೆದರಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಇದೇ ವೇಳೆ ನೂತನವಾಗಿ ಒಬಿಸಿ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ ಅಧಿಕಾರ ಸ್ವೀಕರಿಸಿದರು.