Advertisement

ಹಿಂದೂ ಧರ್ಮದ ಮಹಾ ಸಂರಕ್ಷಕಿ ಅಹಲ್ಯಾ ಬಾಯಿ ಹೋಳ್ಕರ್‌

05:33 PM Jun 02, 2022 | Team Udayavani |

ಮೈಸೂರು: ಇಂದು ಹಿಂದೂ ಧರ್ಮದ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ, ಹಿಂದೂ ಧರ್ಮದ ಮಹಾ ಸಂರಕ್ಷಕಿ ಅಹಲ್ಯಾಬಾಯಿ ಹೋಳ್ಕರ್‌ ಎಂಬುದನ್ನು ಮರೆಯಬಾರದು. ಹೀಗಾಗಿ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಹೋಳ್ಕರ್‌ ಪೀಠ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ, ಶೆಫ‌ರ್ಡ್ಸ್ ಇಂಡಿಯಾ ಇಂಟರ್‌ ನ್ಯಾಷನಲ್‌ ಸಂಸ್ಥಾಪಕ ಅಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದರು.

Advertisement

ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶೆಪರ್ಡ್ ಇಂಟರ್‌ ನ್ಯಾಷನಲ್‌ ವತಿಯಿಂದ ಆಯೋಜಿಸಿದ್ದ ರಾಣಿ ಅಹಲ್ಯಾಬಾಯಿ ಹೋಳ್ಕರ್‌ ಅವರ 297ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋಳ್ಕರ್‌ ಅಪ್ರತಿಮ ಹೋರಾಟಗಾರ್ತಿ. ಅವರ ಪೀಠವನ್ನು ವಿವಿಯಲ್ಲಿ ಸ್ಥಾಪಿಸಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಲಾಗುವುದು. ಜತೆಗೆ ಶೆಫ‌ರ್ಡ್ಸ್ ವತಿಯಿಂದ ಐದು ಲಕ್ಷ, ಕನಕಗಿರಿ ಚಾರಿಟೆಬಲ್‌ ಟ್ರಸ್ಟ್‌ ನಿಂದ ಐದು ಲಕ್ಷ ರೂ.ಗಳನ್ನು ವಂತಿಗೆ ನೀಡಲಾಗುವುದು ಎಂದರು.

ಅಹಲ್ಯಾಬಾಯಿ ಹೋಳ್ಕರ್‌ ಕುರುಬ ಸಮಾಜಕ್ಕೆ ಸೇರಿದವರು. ಗ್ರಾಮೀಣ ಪ್ರದೇಶದಿಂದ ಬಂದು ರಾಣಿಯಾಗಿ ದಿಟ್ಟ ಆಡಳಿತ ನಡೆಸಿದ ಮಹಿಳೆಯಾಗಿ ದ್ದಾರೆ. ಮಹಿಳೆಯರ ಪರವಾದ ಹಲವಾರು ಕ್ರಾಂತಿಕಾರಕ ತೀರ್ಮಾನಗಳನ್ನು ಅಂದಿನ ದಿನಮಾನ ದಲ್ಲೇ ಕೈಗೊಂಡಿದ್ದರು ಎಂದು ಬಣ್ಣಿಸಿದರು.

15 ದಿನಗಳಲ್ಲಿ ಕಾರ್ಯಗತ: ಮುಕ್ತ ವಿವಿ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಮಾತನಾಡಿ, ವಿಶ್ವನಾಥ್‌ ಅವರ ಪ್ರಸ್ತಾಪವನ್ನು ಒಪ್ಪಿದ್ದೇವೆ. ಮುಂದಿನ ಹದಿನೈದು ದಿನಗಳಲ್ಲಿ ಕಾರ್ಯಗತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಪೀಠಸ್ಥಾಪನೆಗೆ ಹದಿನೈದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದು, ಪೀಠ ಸ್ಥಾಪನೆಯಾದ ಮೇಲೆ ನಿರ್ದೇಶಕರನ್ನು ನೇಮಕ ಮಾಡಲು ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್‌ ಅಪ್ಪಟ ದೇಶಭಕ್ತೆ, ಅಪ್ರತಿಮ ಹೋರಾಟ ಗಾರ್ತಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹೋಳ್ಕರ್‌ ರಾಣಿಯಾಗಿ ಆಡಳಿತ ನಡೆಸಿ ಇತರರಿಗೆ ಮಾದರಿದರು. ಝಾನ್ಸಿ ಲಕ್ಷೀ ಬಾಯಿಯಷ್ಟೇ ಹೋಳ್ಕರ್‌ ಮಹಿಳೆಯರ ವಿಚಾರಗಳಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದರು. ಮಹಿಳಾ ಸಾಧಕಿ ಯಾಗಿ ದೇಶಕ್ಕೆ ಪ್ರೇರಣೆಯಾಗಿದ್ದರು ಎಂದರು.

Advertisement

ವಿಶ್ವನಾಥ್‌ ಅವರು ಸಮಾಜದ ಅಭಿವೃದ್ಧಿಗೆ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಸಾಮಾಜಿಕ ನ್ಯಾಯ ಪಡೆಯಬೇಕು. ಮುಂದಿನ ದಿನಗಳಲ್ಲಿ ಹೋಳ್ಕರ್‌ ಅವರ ಹೆಸರಿನಲ್ಲಿ ಹತ್ತಾರು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕಾಗಿನೆಲೆ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ವಹಿಸಿದ್ದರು. ನಗರಪಾಲಿಕೆ ಮಾಜಿ ಸದಸ್ಯೆ ಕಮಲಮ್ಮ, ಶೆಫ‌ರ್ಡ್ಸ್ ಇಂಡಿಯಾ ಇಂಟರ್‌ ನ್ಯಾಷನಲ್‌ ಜಿಲ್ಲಾಧ್ಯಕ್ಷ ಎಚ್‌.ಬೀರಪ್ಪ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next