Advertisement

Ayodhya: ಮಂದಿರ ನಿರ್ಮಾಣಕ್ಕೆ ಅಹರ್ನಿಶಿ ಸೇವೆ- ನಿತ್ಯ 12 ಗಂಟೆಗಳ ಕಾಲ ದುಡಿಮೆ

12:11 AM Dec 28, 2023 | Team Udayavani |

ಅಯೋಧ್ಯೆ: ಬಾನಲ್ಲಿ ನೇಸರನ ಕೆಂಪು ಕಿರಣ ಮೂಡುವ ಮುನ್ನವೇ ಮೆಟ್ಟಿಲುಗಳ ಮೇಲೆ ಕುಸುರಿಯ ಕಲೆಯ ಕೆಲಸದ ಚಿತ್ತಾರ ಮೂಡುತ್ತಿದೆ. ಹಗಲು ರಾತ್ರಿಗಳ ಪರಿವಿಲ್ಲದೇ ಸಾವಿರಾರು ಮಂದಿ ದಿನದಲ್ಲಿ 12 ಗಂಟೆಗೂ ಅಧಿಕ ಕಾಲ ಶ್ರಮಿಸುತ್ತಿದ್ದಾರೆ ಇದು ಉದ್ಘಾಟನೆಗೆ ಸಜ್ಜುಗೊಂಡಿರುವ ಅಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ಅವಿರತವಾಗಿ ದುಡಿಯುತ್ತಿರುವವರ ಗಾಥೆ !

Advertisement

ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿಯಾಗಿರುವಂತೆಯೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಪೂರ್ಣಗೊಳಿಸುವ, ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವ ಕಾರ್ಯವೂ ಭರದಿಂದ ಸಾಗುತ್ತಿದ್ದು, ಅದಕ್ಕಾಗಿ ಶ್ರಮಿಸುತ್ತಿರುವವರ ಬಗ್ಗೆ ಯೋಜನಾ ವ್ಯವಸ್ಥಾಪಕ ಜಗದೀಶ್‌ ಆಫ‌ಲೆ ಮಾಹಿತಿ ಹಂಚಿಕೊಂಡಿದ್ದಾರೆ.

ಅವರೇ ಹೇಳಿದಂತೆ ಮಂದಿರದ ನೆಲಮಹಡಿಯ ಕಾರ್ಯ ಪೂರ್ಣಗೊಂಡಿದ್ದು, ಮೇಲ್ಮಹಡಿಯ ಕಾರ್ಯವೂ ನಡೆಯುತ್ತಿದೆ ಅಲ್ಲಿ ಅಳವಡಿಸುವ ಕಂಬಗಳ ಕೆತ್ತನೆಗೆ ಇನ್ನಿಲ್ಲದಂತೆ ಕುಶಲಕರ್ಮಿಗಳು ಶ್ರಮವಹಿಸುತ್ತಿದ್ದಾರೆ. ಈಗಾಗಲೇ ನೆಲ ಮಹಡಿಯಲ್ಲಿ ಕಂಬಗಳನ್ನು ಅಳವಡಿಸಲಾಗಿದ್ದು ಅದಕ್ಕಾಗಿ 400 ಮಂದಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿ ಕುಶಲಕರ್ಮಿ ದಿನದಲ್ಲಿ 12 ಗಂಟೆ ದುಡಿದರೂ ಪ್ರತಿ ಕಂಬದ ಕೆತ್ತನೆಗೆ 15 ರಿಂದ 20 ದಿನಗಳ ಸಮಯ ವ್ಯಯಿಸಲಾಗುತ್ತಿದೆ.

ನೆಲಮಹಡಿ ಪೂರ್ಣಗೊಂಡಿದ್ದರೂ ಇನ್ನೂ 161 ಅಡಿ ಎತ್ತರದ ವರೆಗಿನ ಮಂದಿರದ ಕಾರ್ಯಗಳು ಬಾಕಿ ಇದ್ದು, ಇದಕ್ಕಾಗಿ ಬರೋಬ್ಬರಿ 4,000 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಅಮೃತ ಶಿಲೆಗಳ ಕೆತ್ತನೆ ಒಂದೆಡೆಯಾದರೆ ರಾಜಸ್ಥಾನದ ಗುಲಾಬಿ ಮರಳುಗಲ್ಲು, ಗ್ರಾನೈಟ್‌ಗಳ ಕೆಲಸಕ್ಕೆಂದೇ ಪ್ರತ್ಯೇಕ ಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನನಗೆ ರಾಮನ ಸೇವೆ ಸಿಕ್ಕಿದ್ದೇ ಅದೃಷ್ಟ ಎಂದ ಕಾರ್ಮಿಕ
ದಿನಂಪ್ರತಿ ಮಂದಿರದ ಕಾರ್ಯಾಚರಣೆಗಾಗಿ ಶ್ರಮಿಸುತ್ತಿರುವ ಕಾರ್ಮಿಕರ ಪೈಕಿ ಸುಧಾಮ ಚೌಹಾಣ್‌ ಕೂಡ ಒಬ್ಬರು. ಮುಂಜಾನೆ ನಾಲ್ಕಕ್ಕೇ ಬುತ್ತಿಯೊಂದಿಗೆ ನಿರ್ಮಾಣ ಪ್ರದೇಶಕ್ಕೆ ಹಾಜರಾಗುವ ಅವರಿಗೆ ಸಮಯ ಸಾಗುವುದರ ಪರಿವೇ ಇಲ್ಲದಂತಾಗಿದೆ. ಕೆಲವೊಮ್ಮೆ 12 ಗಂಟೆ ಮತ್ತೂ ಕೆಲವೊಮ್ಮೆ ಹಗಲಿರುಳು ದುಡಿದಿದ್ದಾರೆ. ಮಂದಿರಕ್ಕಾಗಿ ನಾವೂ ಶ್ರಮಿಸಿದ್ದೇವೆ ಎನ್ನುವ ಅದೃಷ್ಟ ಎಷ್ಟು ಮಂದಿಗೆ ಸಿಕ್ಕೀತು ? ಆ ಅದೃಷ್ಟ ನನಗೆ ಸಿಕ್ಕಿದೆ. ರಾಮನ ಸೇವೆಯ ಸಾರ್ಥಕತೆ ಎದುರು ಈ ದಣಿವು ಹೆಚ್ಚೇನಲ್ಲ ಎಂಬುದು ಅವರ ಮಾತು..

Advertisement

ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಕಾರ್ಮಿಕರ ಬಲ
ಮಂದಿರದ ನಿರ್ಮಾಣಕ್ಕೆಂದು ರಾಜಸ್ಥಾನ ಗುಲಾಬಿ ಮರಳುಗಲ್ಲು, ಮಹಾರಾಷ್ಟ್ರದ ಮರ, ತೆಲಂಗಾಣದ ಗ್ರಾನೈಟ್‌ಗಳು ಬಂದಿರುವಂತೆಯೇ ಇಲ್ಲಿನ ಪ್ರತಿಯೊಂದು ನಿರ್ಮಾಣ ಕಾರ್ಯಕ್ಕೂ ವಿವಿಧ ರಾಜ್ಯಗಳ ಕಾರ್ಮಿಕರು, ಕುಶಲ ಕರ್ಮಿಗಳು ಶ್ರಮವಹಿಸುತ್ತಿದ್ದಾರೆ. ಕರ್ನಾಟಕದಿಂದ ಗ್ರಾನೈಟ್‌ ಕೆಲಸಗಾರರು ಬಂದಿದ್ದರೆ, ತಮಿಳುನಾಡಿನಿಂದ ಬಡಗಿಗಳು ಬಂದಿದ್ದಾರೆ. ಒಡಿಶಾದಿಂದ ಮರಳುಗಲ್ಲು ಕೆತ್ತನೆ ಮಾಡುವ ಶಿಲ್ಪಿಗಳನ್ನೂ ಹಾಗೂ ರಾಜಸ್ಥಾನದಿಂದ ವಿಗ್ರಹಗಳ ಕೆತ್ತನೆ ಮಾಡುವ ಶಿಲ್ಪಿಗಳನ್ನು ಕರೆಸಲಾಗಿದ್ದು, ಅವರೆಲ್ಲರೂ ಇಲ್ಲಿಯೇ ಬೀಡುಬಿಟ್ಟು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದೂ ಆಫ‌ಲೆ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next