ಮುಂಬಯಿ: ಅಬಕಾರಿ ಇಲಾಖೆಯಿಂದ ಪರ್ಮಿಟ್ ಹೊಟೇ ಲಿಗರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಅಬಕಾರಿ ವಿಭಾಗದ ಮುಖ್ಯ ಸಚಿವೆ ವಲ್ಸಾ ನಾಯಕ್ ಸಿಂಗ್ ಮತ್ತು ಅವರ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಈಸ್ ಆಫ್ ಡೂಯಿಂಗ್ ಬಿಜಿನೆಸ್ ಪ್ರಕಾರ ಈ ಸಮಸ್ಯೆಗಳನ್ನು ಪರಿಹರಿಸುವ ಆಶ್ವಾಸನೆಯನ್ನು ಮುಖ್ಯ ಸಚಿವೆ ನೀಡಿದ್ದಾರೆ. ಈ ಸಮಸ್ಯೆಗಳಲ್ಲಿ ಟ್ರಾನ್ಸ್‌ಫಾರ್ ಫೀಸ್, ಎಫ್‌ಎಲ್-6 ಪುಸ್ತಕ, ಎಫ್‌ಎಲ್-11 ರಿಂದ ಮಧ್ಯ ಖರೀದಿ, ರಿಡೆವಲಪ್‌ಮೆಂಟ್ ಸಮಯದಲ್ಲಿ ಅಬಕಾರಿ ಶುಲ್ಕದಲ್ಲಿ ಕಡಿತ ಹಾಗೂ ಹಲವು ಸಮಸ್ಯೆಗಳನ್ನು ಬಗೆಹರಿಸುವ, ಸರಳೀಕರಣಗೊಳಿ ಸುವ ಆಶ್ವಾಸನೆಯನ್ನು ಇಲಾಖೆಯು ನೀಡಿದೆ. ಮುಂಬಯಿ ಅಗ್ನಿಶಾಮಕ ದಳದ ಅಗ್ನಿ ಸುರಕ್ಷತೆಯ ನಿಯಮಗಳಲ್ಲಿ ಬಹಳಷ್ಟು ಸರಳೀಕರಣ ಹಾಗೂ ಪಾರದರ್ಶಕತೆಯನ್ನು ಮಾಡಿದ್ದು, ಅದರ ಅಂತಿಮ ರೂಪ ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆಯಿದೆ ಎಂದು ಆಹಾರ್‌ನ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ ಅವರು ನುಡಿದರು.
ಸೆ. 27 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆದ ಆಹಾರ್‌ನ 9 ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಸ್ಯೆಗಳನ್ನು ಎಲ್ಲರು ಒಂದಾಗಿ ಒಗ್ಗಟ್ಟಿನಿಂದ ಎದುರಿಸಿ ಬಗೆಹರಿಸಿಕೊಳ್ಳೋಣ ಎಂದು ಕರೆನೀಡಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ ಅವರು ಮಾತನಾಡಿ, ಹೊಸ ಆಡಳಿತ ಸಮಿತಿಯ ಮೊದಲನೇ ಸಭೆ ಡಿ. 21ರಂದು ಬಂಟರ ಸಂಘ ಅನೆಕ್ಸ್ ಕಟ್ಟಡದಲ್ಲಿ ಅಪರಾಹ್ನ 3 ಕ್ಕೆ ನಡೆಯಲಿದೆ. ತಮ್ಮ ಸಾಮಾಜಿಕ ಕಾರ್ಯದ ಅಂಗವಾಗಿ ಎಚ್‌ಪಿಸಿಎಲ್ ಜೊತೆಗೂಡಿ ಸ್ವತ್ಛ ಹಿ ಸೇವಾ ಎಂಬ ಸಾರ್ವಜನಿಕ ಜಾಗೃತಾ ಅಭಿಯಾನವನ್ನು ಪ್ರಾರಂಭಿಸಲಾ ಗಿದ್ದು, ಅದರ ಭಿತ್ತಿಪತ್ರಗಳನ್ನು ಸರ್ವ ಸದಸ್ಯ ಹೊಟೇಲಿಗರು ತಮ್ಮ ಹೊಟೇಲ್‌ಗಳ ಆವರಣದಲ್ಲಿ ಲಗತ್ತಿಸ ಬೇಕು. ಮುಂಬಯಿಯ ಮಾಜಿ ಪೊಲೀಸ್ ಆಯುಕ್ತ ಶಿವಾನಂದ ಅವರ ರೋಟಿ ಬ್ಯಾಂಕ್ (ಎನ್‌ಜಿಒ) ನಲ್ಲಿ ಸಾಮಾಜಿಕ ಕಾರ್ಯದ ಅಂಗವಾಗಿ ದಾನ ಪೆಟ್ಟಿಗೆಗಳನ್ನು ಎಲ್ಲಾ ಸದಸ್ಯರ ಹೊಟೇಲ್‌ನಲ್ಲಿ ಇಡಲಾಗಿದೆ. ಇದರಲ್ಲಿ ಧನ ಸಂಗ್ರಹಿಸಿ ಬಡವರ ಊಟಕ್ಕಾಗಿ ನೀಡಲಾಗುವುದು. ಆಹಾರ್ ಅಕ್ವಾಕ್ರಾಫ್ಟ್ ಪ್ರೊಜೆಕ್ಟ್ ಲಿಮಿಟೆಡ್‌ನೊಂದಿಗೆ ಒಪ್ಪಂಧವನ್ನು ಮಾಡಿಕೊಂಡಿದ್ದು, ಶುದ್ಧ ನೀರನ್ನು ನೀರು ಎಟಿಎಂ ಮುಖಾಂತರ ಕಡಿಮೆ ದರದಲ್ಲಿ ನೀಡಲು, ಹೊಟೇಲ್‌ಗಳಲ್ಲಿ ಅಳವಡಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಲುಂಡ್‌ನಗರ ಸೇವಕ ಹಾಗೂ ಮಹಾನಗರ ಪಾಲಿಕೆಯ ಗ್ರೂಪ್ ಲೀಡರ್ ಮನೋಜ್ ಕೋಟಕ್ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಉತ್ತರಿಸಿದ ಮನೋಜ್ ಕೋಟರ್ ಅವರು, ಈಸ್ ಆಫ್ ಡೂಯಿಂಗ್ ಬಿಜಿನೆಸ್ ಇದರ ಕೇಂದ್ರ, ರಾಜ್ಯ ಸರಕಾರ ಹಾಗೂ ಮಹಾನಗರ ಪಾಲಿಕೆ ವಿವಿಧ ಕಾನೂನನ್ನು ಸರಳೀಕರಿಸಲು ಪ್ರಯತ್ನಿಸುತ್ತಿದ್ದು, ಇದರ ಬಗ್ಗೆ ವಿವರಣೆಯನ್ನು ತನಗೆ ನೀಡಿದರೆ, ಅದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಆಹಾರ್ ಹೊಟೇಲ್ ಉದ್ಯಮಕ್ಕಾಗಿ ಅತೀ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕಾಗಿ ಆಹಾರ್‌ನ್ನು ಅಭಿನಂದಿಸುತ್ತಿದ್ದೇನೆ. ಹೊಟೇಲ್ ಉದ್ಯಮದ ಸಮಸ್ಯೆಗಳನ್ನು ಬಗೆಹರಿಸಲು ಸದಾಸಿದ್ಧನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಉಪ ಸಮಿತಿಯ ಅಧ್ಯಕ್ಷ ನೀರಜ್ ಶೆಟ್ಟಿ, ನಿರಂಜನ್ ಶೆಟ್ಟಿ ಹಾಗೂ ಶಶಿಧರ ಶೆಟ್ಟಿ ಅವರು ತಮ್ಮ ತಮ್ಮ ಸಮಿತಿಗಳ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಆಹಾರ್‌ನ ಸಲಹೆಗಾರರಾದ ಆದರ್ಶ್ ಶೆಟ್ಟಿ, ನಾರಾಯಣ ಆಳ್ವ, ಸುಧಾಕರ ವೈ. ಶೆಟ್ಟಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯ ಪ್ರಾಯೋಜಕ ವಲಯ ಆರರ ಉಪಾಧ್ಯಕ್ಷ ಅಮರ್ ಶೆಟ್ಟಿ ಅವರು ಸ್ವಾಗತಿಸಿದರು.
39ನೇ ವಾರ್ಷಿಕ ಮಹಾಸಭೆಯ ಬಗ್ಗೆ ಉಪಾಧ್ಯಕ್ಷ ರಾಜನ್ ಶೆಟ್ಟಿ ಅವರು ವಿವರಣೆ ನೀಡಿ, ಇದರ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವಾಗಿದೆ ಎಂದರು. ಉಪಾಧ್ಯಕ್ಷರುಗಳಾದ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುರೇಶ್ ಎಸ್. ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ವಿಜಯ ಎಸ್. ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್ ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಅಮರ್ ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಡಿ. ಶೆಟ್ಟಿ ಅವರು ತಮ್ಮ ತಮ್ಮ ವಲಯಗಳ ಕಾರ್ಯಚಟುವಟಿಕೆ, ಸಿದ್ಧಿ-ಸಾಧನೆಗಳನ್ನು ವಿವರಿಸಿದರು.
ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದ 18 ವೈವಿಧ್ಯಮಯ ಮಳಿಗೆಗಳ ಪರಿಚಯವನ್ನು ಗೌರವ ಕಾರ್ಯದರ್ಶಿ ಸಮಿತ್ ಅರಸ ಅವರು ಮಾಡಿದರು. ಸಭೆಯ ಪ್ರಾಯೋಜಕರಾದ ವಲಯ ಆರರ ಉಪಾಧ್ಯಕ್ಷ ಅಮರ್ ಶೆಟ್ಟಿ ಅವರನ್ನು ವಲಯದ ಸಮಿತಿಯ ಸದಸ್ಯರು ಅಭಿನಂದಿಸಿ ಶುಭ ಹಾರೈಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.