ಅಮ್ಮ.. ನಾನು ಶೃಂಗೇರಿಗೆ ಹೋಗಿ ಬರ್ತೇನೆ, ಬೆಳಗ್ಗೆ ಸುಮಾರು 9:00 ಗಂಟೆಯ ಹೊತ್ತದು, ನನ್ನ ಪಾಲಿಗೆ ಹೊತ್ತಿನ ಹೊತ್ತಿಗೆ ಒತ್ತು ಪಡೆದ ಹೊತ್ತು.
ನನ್ಮ ಅಂಬಾರಿ ಸುಜ್ಹುಕಿ ಜ್ಹ್ಯೂಸ್ ಬೈಕಿನಲ್ಲಿ ಹೊರಟೆ… ಪೂರ್ವ ತಪ್ಪಲಿನಲ್ಲಿ ಹಸಿರನ್ನುಂಡ ಬೆಟ್ಟ ಸಾಲುಗಳ ದಾಟಿ ಇದ್ದ ಶಾರದೆಯ ಮಡಿಲ ಊರು ಶೃಂಗ ಗಿರಿಗೆ(ಶೃಂಗೇರಿ).
ಬೈಕಿನ ಚಕ್ರಗಳು ಸವೆಯುತ್ತಿದ್ದವು, ಓಡುತ್ತಿದ್ದವು ಮನದಲ್ಲಿ ಶಾರದೆಯ ಗಾನವೊಂದೆ ಅನುರಣಿಸುತ್ತಿತ್ತು. ಮನೆಯಿಂದ ಹೊರಟವ ಅರ್ಧ ವಿರಾಮ ಕೊಟ್ಟಿದ್ದು, ಆಗುಂಬೆ ಘಾಟಿಯ ಪಾದದ ತುದಿ ಸೋಮೇಶ್ಬರದ ಗಣೇಶನ ದೇಗುಲದ ಮುಂದೆ. ಗಣೇಶನಿಗೆ ಸಲಾಂ ಹೊಡೆದು ಮತ್ತೆ ಶಾರದೆಯ ಪಾದ ಸ್ಪರ್ಶದ ನೆಲ ಭೂಮಿಗೆ.
ವಾವ್ಹ್ ಅದೆಂತಹ ಅದ್ಭುತ…ಅದೆಂತಹ ಸೋಜಿಗ, ಅದೆಂತಹ ವಿಸ್ಮಯ.. ರಾಶಿ ರಾಶಿ ಹಸಿರು ಮರ ಸಾಲುಗಳ ನಡುವೆ ಬಗೆದ ದಾರಿಯಲ್ಲಿ ಏಕಾಂಗಿ ಪಯಣ ಒಂದಿನಿತೂ ಶುಷ್ಕವೆನ್ನಿಸಲಿಲ್ಲ. ಹಿತ ಗಾಳಿಯ ಉಸಿರನ್ನು ಸೇವಿಸುತ್ತಾ, ಘಾಟಿಯ ಹೇರ್ ಪಿನ್ ತಿರುವುಗಳನ್ನು ಏರುತ್ತಾ ಏರುತ್ತಾ ಭವ್ಯ ದಿವ್ಯ ರಮ್ಯಛಾಯೆಗಳು ನನ್ನೊಳಗೆ ಮೂರ್ತಿಭವಿಸುತ್ತಿತ್ತು. ಅದು ನಿಜಕ್ಕೂ ಹಿತಾನುಭವ ಸಂಕಲನ.
ಆಧುನೀಕತೆಯ ಭರಾಟೆಯಲ್ಲಿ ನಮ್ಮ ಮೂಲ ನೆಲೆಯ ಸೊಗಡನ್ನೆ ಕಳೆದುಕೊಂಡ ನಮಗೆ ತೀರಾ ನಮ್ಮದೇ ಎನ್ನಿಸುವ ಆಪ್ತತೆ ನೀಡುವುದು ಆಗುಂಬೆಯ ಏರಿದ ಮೇಲೆ ಆಗುಂಬೆಗೂ, ಶೃಂಗೇರಿಗೂ ಇರುವ ಅಂತರದಲ್ಲಿನ ಹಳ್ಳಿ ಸೊಗಡು, ಮಲೆನಾಡಿನ ಚಿತ್ರವನ್ನು ದರ್ಶಿಸುವ ಕನ್ನಡಿಯದು. ರಾಶಿ ಸಾಲು ಗೋವುಗಳನ್ನು ಮೇವಿಗೆ ಕರೆದುಕೊಂಡು ಹೋಗುತ್ತಿದ್ದ ಅಜ್ಜ, ಹಾಲುಣ್ಣುತ್ತಿದ್ದ ಅಂಬೆ ಹಸು, ತೋಟಗಳು, ಅಲ್ಲಲ್ಲಿ ಕಾಣಸಿಗುವ ಕಲ್ಬಂಡೆಗಳನ್ನೇರಿಳಿದು ಮುಂದಕ್ಕೆ ಸಾಗುವ ತೊರೆಗಳು, ಧೂಳಿನ ಮುಸುಕಿಲ್ಲದ ದಾರಿ, ತಂಗಾಳಿಯೊಂದಿಗೆ ಮೈಗೆ ಚುಚ್ಚುವ ಸೂಜಿ ಬಿಸಿಲು…ವಾವ್ಹ್ ಎದೆಗೆ ಹತ್ತಿರವಾಗುವ ಭಾವಗಳಿಗೆ ಏನೆಂದು ಹೆಸರಿಡಲಿ…?
ಓದಿ : ಟಿ ಎಮ್ ಸಿ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳ ಕಾಶ್ಮೀರದಂತಾಗುತ್ತದೆ : ಸುವೇಂದು ಅಧಿಕಾರಿ
ಇದೇ ಮೊದಲಲ್ಲ ಶೃಂಗೇರಿಗೆ ಈ ಏಕಾಂಗಿ ಪಯಣ, ಈ ಹಿಂದೆಯೂ ಒಂದೆರಡು ಬಾರಿ ಹೋಗಿದ್ದಿದೆ… ಆದರೇ, ಅವುಗಳು ಈ ಪಯಣದಷ್ಟು ಖುಷಿ ಕೊಟ್ಟಿರಲಿಲ್ಲ. ನನ್ನ ಅಂಬಾರಿ ವಿದ್ಯಾದಿದೇವತೆ ಶಾರದೆಯ ಮಂದಿರದ ಭವ್ಯ ನಭಚುಂಬಿ ಮನೋಹರ ಗೋಪುರದೆದುರಿಗೆ ಹೋಗಿ ನಿಂತಿದ್ದೇ, ನಿಂತಿದ್ದು… ಅದೆಷ್ಟು ಆನಂದ. ಅನುಭವಿಸಿದ ನನಗಷ್ಟೇ ಗೊತ್ತದು.
ತುಂಗೆಯ ಮೆಲು ಹರಿವು, ಅಲ್ಲಿ ಜುಮು ಜುಮು ಮೈ ಬಳುಕಿಸುವ ಮತ್ಸ್ಯಗಳು ಅದೆಂತಹ ಭವ್ಯ ದರ್ಶನ, ವಿದ್ಯಾಶಂಕರನ ಶಿಲ್ಪ ಗುಡಿಯ ಅದೆಂತಹ ಕಲಾ ದರ್ಶನ, ಅಭಯ ಹಸ್ತೆ ತಾಯಿ ಶಾರದೆಯ ಪುಣ್ಯ ದರ್ಶನವನ್ನು ಹೇಗೆ ಪದಗಳಲ್ಲಿ ಕಟ್ಟಲಿ…? ಹಿತಾನುಭವೆಂದಷ್ಟೇ ಹೇಳಬಲ್ಲೆ.
ಇದಲ್ಲವೇ ದೇವ ಸ್ವರೂಪ, ಇದಲ್ಲವೇ ದೇವ ಶಕ್ತಿ…? ಹಿತ, ಸಂತೋಷ, ಆನಂದವನ್ನು ಹೊರತಾಗಿ ಮತ್ತೇನು ಬೇಕು ಬದುಕಿಗೆ…?
ನೀವೊಮ್ಮೆ ಆಗುಂಬೆಯಾಗಿ ಶೃಂಗೇರಿಗೆ ಏಕಾಂಗಿಯಾಗಿ ಹೋಗಿ ಬನ್ನಿ. ಹಿತಾನುಭವ ನಿಮ್ಮದಾಗಲಿ. ಹ್ಯಾಪಿ ಜರ್ನಿ..
ಬರಹ : ಶ್ರೀರಾಜ್ ವಕ್ವಾಡಿ
ಫೋಟೋ ಕೃಪೆ :
ಇಂಟರ್ ನೆಟ್
ಓದಿ : ಮೋದಿ ಕೊಲ್ಕತ್ತಾ ಭೇಟಿ ಹಿನ್ನೆಲೆಯಲ್ಲೇ ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ