Advertisement
ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ 14 ಮತ್ತು 7ನೇ ತಿರುವುಗಳಲ್ಲಿ ಕಳೆದ ಮಳೆಗಾಲದಲ್ಲಿ ಕುಸಿತ ಸಂಭವಿಸಿ ಸಂಚಾರ ಅಪಾಯಕಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎ. 1ರಿಂದ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ.
ಬಸ್, ಆ್ಯಂಬುಲೆನ್ಸ್, ಕಾರು, ದ್ವಿಚಕ್ರ ವಾಹನಗಳಿಗೆ ಮೇ 15ರ ಮಧ್ಯರಾತ್ರಿಯಿಂದ ಸಂಚಾರಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸರಕು ಸಾಗಾಟ ಮಾಡುವ ಘನ ವಾಹನಗಳಿಗೆ ಜೂ. 1ರಿಂದ ಸಂಚಾರ ಅವಕಾಶ ಕಲ್ಪಿಸಲಾಗಿದೆ.
Related Articles
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಿನನಿತ್ಯ ಈ ಮಾರ್ಗದಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದು 45 ದಿನಗಳಿಂದ ಘಾಟಿ ಬಂದ್ ಆದ ಪರಿಣಾಮ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಈಗ 7ನೇ ತಿರುವಿನ ಕಾಮಗಾರಿ ನಡೆಸದೇ ಸಂಚಾರಕ್ಕೆ ಅವಕಾಶ ಕೊಡುತ್ತಿದ್ದು ಮುಂದೆ ಸಮಸ್ಯೆ ಆದರೆ ಯಾರು ಹೊಣೆ.
Advertisement
ಈ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಯಾಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭದಲ್ಲಿ ಘಾಟಿ ರಸ್ತೆ ಸಂಚಾರ ಸ್ಥಗಿತದಿಂದ ತೊಂದರೆಯಾಗಿತ್ತು. 7ನೇ ತಿರುವಿನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ
ಆಗುಂಬೆ ಘಾಟಿಯ ಹೇರ್‌ಪಿನ್ 7ನೇ ತಿರುವು ಕಳೆದ ವರ್ಷ ಸುರಿದ ಮಳೆಯಲ್ಲಿ ಅತೀ ಹೆಚ್ಚು ಭೂಕುಸಿತಗೊಂಡ ಪ್ರದೇಶ. ಈ ಭಾಗದಲ್ಲಿ ಸಂಚಾರ ಅಪಾಯ ಎಂಬ ಕಾರಣಕ್ಕೆ ಆಗುಂಬೆ ಘಾಟಿ ಸಂಚಾರ ಬಂದ್ ಮಾಡಲಾಗಿತ್ತು. ಇಲ್ಲಿ ಈಗ ಕೇವಲ ತಾತ್ಕಾಲಿಕ ಮರಳು ಚೀಲಗಳನ್ನು ಅಳವಡಿಸಿರುವುದಷ್ಟೇ ಅಲ್ಲದೆ ಯಾವುದೇ ದುರಸ್ಥಿ ಕಾರ್ಯ ಕೈಗೊಂಡಿಲ್ಲ. ಮುಂದಿನ ಮಳೆಗಾಲದಲ್ಲಿ ಮತ್ತೆ ವಿಪರೀತ ಮಳೆ ಸುರಿದರೇ ಘಾಟಿ ಕುಸಿತಗೊಂಡು ಮತ್ತೆ ಸಂಚಾರ ಬಂದ್ ಆಗುವ ಭೀತಿ ಇದೆ. ಸಮಸ್ಯೆಯಾಗದು: ಇಲಾಖೆ
ಕಳೆದ ವರ್ಷದ ಮಳೆಗೆ 7ನೇ ತಿರುವಿನಲ್ಲಿ ಕೂಡ ಭೂಕುಸಿತಗೊಂಡು ರಸ್ತೆಯ ಒಂದು ಪಾರ್ಶ್ವ ಬಿರುಕು ಬಿಟ್ಟಿತ್ತು. ಸಮಯದ ಅಭಾವದಿಂದ ಈ ತಿರುವುಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ಈ ಮಳೆಗಾಲದಲ್ಲಿ ಇದು ಸಮಸ್ಯೆಯಾಗದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.