ಕಾಳಗಿ: ಕೃಷಿ ಹಾಗೂ ಪಶುಪಾಲನೆ ನಮ್ಮ ಸಂಸ್ಕೃತಿಯ ಭಾಗವಾಗಿವೆ. ಗ್ರಾಮೀಣ ಭಾಗದಲ್ಲಿ ಈಗಲೂ ಪಶುಪಾಲನೆ ರೈತರ ಪ್ರಮುಖ ಆದಾಯದ ಮೂಲವಾಗಿದ್ದು, ಕೃಷಿ ವರ್ಷದ ಕೆಲವೇ ದಿನ ಉದ್ಯೋಗ ನೀಡಿದರೆ, ಪಶುಪಾಲನೆ ವರ್ಷ ಪೂರ್ತಿ ಉದ್ಯೋಗ ನೀಡುತ್ತದೆ ಎಂದು ಪಶು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ| ಅಣ್ಣರಾವ್ ಪಾಟೀಲ ಹೇಳಿದರು.
ಪಟ್ಟಣದಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಪ್ರಯುಕ್ತ ಪ್ರಗತಿಪರ ಪಶುಪಾಲನಾ ರೈತರಾದ ಶಿವರಾಯ ದೋಟಿಕೋಳ ಅವರನ್ನು ಪಶುಪಾಲನಾ ಇಲಾಖೆ ವತಿಯಿಂದ ಸನ್ಮಾನಿಸಿ ಅವರ 16 ಕರುಗಳಗೆ ಜಂತುನಾಶಕ ಔಷಧ ಕುಡಿಸಲಾಯಿತು. 12 ಆಕಳುಗಳ ಗರ್ಭ ಪರೀಕ್ಷೆ ಹಾಗೂ ಎಲ್ಲ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿ, ರೋಗಗ್ರಸ್ತ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು. ಪ್ರತಿ ವರ್ಷ ಏಪ್ರಿಲ್ ತಿಂಗಳ ಕೊನೆ ಶನಿವಾರದಂದು ವಿಶ್ವ ಪಶು ವೈದ್ಯಕೀಯ ದಿನ ಆಚರಿಸಲಾಗುತ್ತದೆ. ಶಿವರಾಯ ದೋಟಿಕೋಳ ಅವರು ಪಶುಪಾಲನಾ ಇಲಾಖೆ ಮಾರ್ಗದರ್ಶನದಂತೆ ದೇಶಿ ತಳಿಯ ಹಸುಗಳಿಂದ ಹೈನುಗಾರಿಕೆ ಮಾಡುತ್ತಿದ್ದು, ದೇವಣಿ ತಳಿ ರಾಸುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಎರಡು ಹಸುಗಳಿಂದ ಹೈನುಗಾರಿಕೆ ಪ್ರಾರಂಭಿಸಿದ್ದು, 30ಕ್ಕೂ ಹೆಚ್ಚು ಹಸುಗಳನ್ನು ಹೊಂದಿದ್ದಾರೆ. ಇವರ ಸಾಧನೆಗೆ ಪಶುಪಾಲನಾ ಇಲಾಖೆ ಅಭಿನಂದಿಸುತ್ತದೆ ಎಂದರು.
ಪಶು ವೈದ್ಯಕೀಯ ಸಂಸ್ಥೆಗಳನ್ನು ಬಲಪಡಿಸುವುದು 2022ನೇ ವರ್ಷದ ವಿಶ್ವ ಪಶು ವೈದ್ಯಕೀಯ ದಿನದ ಧ್ಯೇಯವಾಕ್ಯವಾಗಿದೆ. ಪಶು ವೈದ್ಯಕೀಯ ಸಂಸ್ಥೆಗಳನ್ನು ಬಲಪಡಿಸುವುದರಿಂದ ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಆರೋಗ್ಯ ಸೇವೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪಶುಪಾಲನೆ ಮಾಡುವುದರ ಮೂಲಕ ನಿರುದ್ಯೋಗ, ಬಡತನ, ಅಪೌಷ್ಟಿಕತೆ ನಿವಾರಿಸಬಹುದು. ಜನಸಂಖ್ಯೆ ಹೆಚ್ಚಾದಂತೆ ಹಾಲು, ಮೊಟ್ಟೆ, ಮಾಂಸಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪಾದನೆ ಹೆಚ್ಚಾಗಲು ಸಗಣಿ ಗೊಬ್ಬರ ಬೇಕು. ಆದ್ದರಿಂದ ಕೃಷಿ ಹಾಗೂ ಪಶುಪಾಲನೆ ನಮ್ಮ ಜೀವನದ ಪ್ರಮುಖ ಅಂಶಗಳಾಗಿವೆ ಎಂದರು.
ಪಶು ವೈದ್ಯಾಧಿಕಾರಿ ಡಾ| ಇಂದ್ರಾಳೆ ಉತ್ಪಲಾ, ಡಾ| ರೇವಪ್ಪಯ್ಯ, ಜಾನುವಾರು ಅಧಿಕಾರಿ ಶಂಕರ ದೊಡ್ಮನಿ ಹಾಗೂ ಸಹಾಯಕ ತಾಯಪ್ಪ ಇದ್ದರು.