Advertisement

ಕೃಷಿಗೆ ಪೂರಕ ವಾತಾವರಣ ಅವಶ್ಯ

12:38 PM Oct 30, 2017 | Team Udayavani |

ಹುಬ್ಬಳ್ಳಿ: ಕೇವಲ ಸಾಲ ಮನ್ನಾದಿಂದ ರೈತರ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ರೈತರ ಬದುಕಿಗೆ ಪೂರಕವಾದ ವಾತಾವರಣ ಸೃಷ್ಟಿಗೆ ಸರಕಾರಗಳು ಮುಂದಾಗುವ ಅನಿವಾರ್ಯತೆ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. 

Advertisement

ರವಿವಾರ ನಡೆದ ಜೆಡಿಎಸ್‌ ರೈತ ವಿಭಾಗದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹಲವು ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣದ ಪರಿಹಾರವಾಗಿ ಕೃಷಿ ಸಾಲಮನ್ನಾ ಮುಖ್ಯವಾಗಿದೆ. ಆದರೆ, ಕೇವಲ ಸಾಲ ಮನ್ನಾದಿಂದಲೇ ರೈತರ ಸಮಸ್ಯೆಗಳೆಲ್ಲವೂ ತೀರುವುದಿಲ್ಲ.

ಬದಲಾಗಿ ಕೃಷಿಗೆ ಪೂರಕ ವಾತಾವರಣ, ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನಗಳೂ ನಡೆಯಬೇಕಾಗಿದೆ ಎಂದರು. ಇತ್ತೀಚೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಇಸ್ರೇಲ್‌ ದೇಶಕ್ಕೆ ತಾವು ಅಧ್ಯಯನ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಕೃಷಿಗೆ ಸರಕಾರ ನೀಡುತ್ತಿರುವ ನೆರವು, ಪ್ರೋತ್ಸಾಹ, ಉತ್ಪನ್ನಗಳಿಗೆ ಬೆಲೆ, ನೀರಿನ ಸದ್ಬಳಕೆ ಅತ್ಯದ್ಬುತವಾಗಿದೆ.

ರೈತರಿಗೆ ಬೇಕಾದ ಎಲ್ಲ ನೆರವನ್ನು ಸರಕಾರವೇ ಭರಿಸುತ್ತಿದ್ದು, ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತಿದ್ದರಿಂದ ರೈತರು ಸಾಲಗಾರರಾಗಿಲ್ಲ. ಸಹಕಾರ ಪದ್ಧತಿ ಕೃಷಿ, ಹನಿ ನೀರಾವರಿ ಇನ್ನಿತರ ಕ್ರಮಗಳ ವೆಚ್ಚವನ್ನು ಕಡಿಮೆಗೊಳಿಸಿ ಉತ್ಪನ್ನ ಹೆಚ್ಚುವಂತೆ ಮಾಡುತ್ತಿವೆ.

ಹೈನುಗಾರಿಕೆಯಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ನಮ್ಮಲ್ಲಿ ಜಾರಿಯಾಗಬೇಕು. ಬಿಎಸ್ಸಿ, ಎಂಎಸ್ಸಿ(ಕೃಷಿ) ಪದವೀಧರರು ನೌಕರರಿಗೆ ಹೋಗುವ ಬದಲು ಕೃಷಿ ಮಾಡಬೇಕು ಎಂದರು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ನಮ್ಮಲ್ಲಿ ಕೃಷಿ ಉತ್ಪಾದನಾ ವೆಚ್ಚ ಅಧಿಕ, ಬೆಂಬಲ ಬೆಲೆ ಕಡಿಮೆ ಇರುವುದೇ ರೈತರ ಸಮಸ್ಯೆಗೆ ಕಾರಣವಾಗಿದೆ. 

Advertisement

ಬಹುರಾಷ್ಟ್ರೀಯ ಕಂಪೆನಿಗಳು ರೈತರ ಭೂಮಿಯನ್ನು ಗುತ್ತಿಗೆ ಪಡೆದು ರೈತರನ್ನು ಅಡಿಯಾಳಾಗಿಸಿಕೊಳ್ಳುತ್ತಿವೆ. ಸಹಕಾರ ಕೃಷಿ  ಪದ್ಧತಿ ಅವಶ್ಯವಾಗಿದೆ ಎಂದರು. ರಾಜಣ್ಣ ಕೊರವಿ ಮಾತನಾಡಿ, ಮಹದಾಯಿ ಇತ್ಯರ್ಥಕ್ಕೆ ಬಿಜೆಪಿ- ಕಾಂಗ್ರೆಸ್‌  ಪ್ರಾಮಾಣಿಕ ಯತ್ನ ತೋರುತ್ತಿಲ್ಲ. 

ಕಳಸಾ-ಬಂಡೂರಿ ನೀರು ತರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆ ಸ್ವಾಗತಿಸುವುದಾಗಿ ಹೇಳಿದರು. ಜೆಡಿಎಸ್‌ ರೈತ ವಿಭಾಗ ಮುಖಂಡ ವಿಕಾಸ ಸೊಪ್ಪಿನ ಮಾತನಾಡಿ, 2018ರ ಚುನಾವಣೆಯಲ್ಲಿ ರೈತ ದಳದ ಪಾತ್ರ, ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟ, ಪಕ್ಷದ ರೈತಪರ ಚಿಂತನೆ ಕುರಿತು ಜನರಿಗೆ ಮನವರಿಕೆ ಬಗ್ಗೆ ಕಾರ್ಯಕಾರಿಣಿಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು. 

ಜೆಡಿಎಸ್‌ ರೈತ ವಿಭಾಗದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ, ಮುಖಂಡರಾದ ಎನ್‌.ಜಿ. ರಾಮಚಂದ್ರ, ನಾಗನಗೌಡ ಗದಿಗೆಪ್ಪಗೌಡ, ಚೈತ್ರಾಗೌಡ, ಭಾಗ್ಯಶ್ರೀ ಲಮಾಣಿ, ಸುರೇಶಗೌಡ ಪಾಟೀಲ, ಅರುಣಗೌಡ ಪಾಟೀಲ, ಸಿ.ಎಸ್‌. ಪಾಟೀಲ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next