Advertisement

ರೈತರ ಮನೆಯಲ್ಲಿ ಕೃಷಿ ಸಚಿವರ ವಾಸ್ತವ್ಯ

02:28 PM Feb 15, 2020 | Suhan S |

ಹಿರೇಕೆರೂರ: ರಾಜ್ಯದ ಜಿಲ್ಲೆಗಳನ್ನು ಸುತ್ತಿ ಪ್ರತಿ ಜಿಲ್ಲೆಯ ಒಬ್ಬ ರೈತರ ಮನೆಯಲ್ಲಿ ಉಳಿದುಕೊಂಡು ಗ್ರಾಮ ವಾಸ್ತವ್ಯ ಮಾಡುತ್ತೇನೆ. ಈ ಮೂಲಕ ರೈತರ ಸಮಸ್ಯೆ ಅರಿಯುತ್ತೇನೆ ಎಂದು ನೂತನ ಕೃಷಿ ಸಚಿವ ಬಿ.ಸಿ. ಪಾಟೀಲ ಘೋಷಿಸಿದರು.

Advertisement

ಕೃಷಿ ಸಚಿವರಾಗಿ ಮೊದಲ ಬಾರಿಗೆ ಶುಕ್ರವಾರ ಕ್ಷೇತ್ರಕ್ಕೆ ಆಗಮಿಸಿದ ಅವರು ತಮ್ಮ ನಿವಾಸದ ಸಮೀಪ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜ್ಯ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿ ಇದೆ. ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ, ಗಾಳಿ ಹೆಚ್ಚು ಬೀಸಿದರೂ ಕಷ್ಟ, ಬೀಸದಿದ್ದರೂ ಕಷ್ಟ ಎಂಬಂತಹ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ರಾಜ್ಯದಲ್ಲಿ ಓಡಾಡಿ ರೈತರ ಬವಣೆ ನೀಗಿಸಬೇಕು ಎಂಬ ಉದ್ದೇಶದಿಂದ ಕೃಷಿ ಇಲಾಖೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಕೃಷಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದಲ್ಲಿ ಬಾಕಿ ಇರುವ ರೈತರಿಗೆ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಒಂದು ತಿಂಗಳಲ್ಲಿ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ, ಗುಡ್ಡದ ಮಾದಾಪುರ ಯೋಜನೆಗೆ ಚಾಲನೆ ನೀಡುತ್ತೇವೆ. ರೈತರ ಸಮಸ್ಯೆಗೆ ಸ್ಪಂದಿಸುವೆ ಸಹಕಾರ ಬೇಕು. ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು, ನಿಮ್ಮ ಪರವಾಗಿ ಸರ್ಕಾರ ಇದೆ. ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು ರೈತನ ಮಗನಾಗಿ ರೈತ ಹೋರಾಟ ಮಾಡಿ 9 ದಿನ ಜೈಲಿಗೆ ಹೋಗಿ ಬಂದು 2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ವಿರೋಧಿಸಿ ಶಾಸಕನಾಗಿ ಆಯ್ಕೆಯಾದೆ. ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರೋ ಸಿ, ವಿರೋಧಿಗಳ ಅಪಹಾಸ್ಯ ಎದುರಿಸಿ 29 ಸಾವಿರ ಮತಗಳ ಅಂತರದಿಂದ ನಿಮ್ಮೆಲ್ಲರ ಆಶೀರ್ವಾದದಿಂದ 4 ಬಾರಿಗೆ ಶಾಸಕನಾಗಿ ಸಚಿವನಾಗಿರುವೆ. ದುಡ್ಡು ಗಳಿಸುವುದೇ ಜೀವನ ಅಲ್ಲ. ಜಗತ್ತಿನಲ್ಲಿ ನಮ್ಮ ಹೆಜ್ಜೆ ಗುರುತು ಬಿಡಬೇಕು ಎಂದರು.

Advertisement

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಬಿ.ಸಿ. ಪಾಟೀಲ ಸೇರಿದಂತೆ 17 ಶಾಸಕರ ತ್ಯಾಗದಿಂದ ಯಡಿಯೂರಪ್ಪನವರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವ ಜವಾಬ್ದಾರಿಯನ್ನು ಬಿ.ಸಿ. ಪಾಟೀಲ ಅವರನ್ನು ಗೆಲ್ಲಿಸುವ ಮೂಲಕ ತಾಲೂಕಿನ ಬಿಜೆಪಿ ಕಾರ್ಯಕರ್ತರು ನಿರ್ವಹಿಸಿದ್ದಾರೆ. ಆ ಮೂಲಕ ನಾಯಕರು ಒಂದಾದರೆ ಕಾರ್ಯಕರ್ತರೂ ಒಂದಾಗುತ್ತೇವೆ ಎಂಬ ಸಂದೇಶವನ್ನು ಸಾರಿದ್ದಾರೆ ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ ಮಾತನಾಡಿ, ಕೃಷಿಕರ ಪರವಾಗಿ ಹೋರಾಟ ನಡೆಸಿ ಜೈಲಿಗೆ ಹೋಗಿ ಬಂದ ಬಿ.ಸಿ. ಪಾಟೀಲರು ಇಂದು ಕೃಷಿ ಸಚಿವರಾಗಿರುವುದು ಅವರಲ್ಲಿರುವ ಛಲಕ್ಕೆ ಸಾಕ್ಷಿಯಾಗಿದೆ. ಅಸಾಧ್ಯವನ್ನು ಸಾಧ್ಯವಾಗಿಸುವ ಗುಣ ಬಿ.ಸಿ. ಪಾಟೀಲರಲ್ಲಿದೆ ಎಂದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌. ಪಾಟೀಲ, ವನಜಾ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ, ಜಿಪಂ ಸದಸ್ಯರಾದ ಎನ್‌.ಎಂ. ಈಟೇರ, ಸುಮಿತ್ರಾ ಪಾಟೀಲ, ತಾಪಂ ಅಧ್ಯಕ್ಷ ರಾಜು ಬಣಕಾರ, ಎಪಿಎಂಸಿ ಅಧ್ಯಕ್ಷ ಶಿದ್ದಪ್ಪ ಕರೇಗೌಡ್ರ, ದೊಡ್ಡಗೌಡ ಪಾಟೀಲ, ಹನುಮಂತಗೌಡ ಭರಮಣ್ಣನವರ, ಜಿ.ಪಿ. ಪ್ರಕಾಶ, ಆರ್‌.ಎನ್‌. ಗಂಗೋಳ, ಮಂಜುಳಾ ಬಾಳಿಕಾಯಿ, ಮಹೇಶ ಗುಬ್ಬಿ, ಕರೇಗೌಡ ಸಣ್ಣಕ್ಕಿ, ದಿಳ್ಳೆಪ್ಪ ಹಳ್ಳಳ್ಳಿ ಸೇರಿದಂತೆ ತಾಪಂ, ಪಪಂ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next