Advertisement

ನಿರಂತರ ಸಂಶೋಧನೆಯಿಂದ ಮಾತ್ರ ಕೃಷಿ ಅಭಿವೃದ್ಧಿ

11:52 AM May 25, 2018 | Team Udayavani |

ಬೆಂಗಳೂರು: ಕೃಷಿಯಲ್ಲಿ ನಿರಂತರ ಸಂಶೋಧನೆ ಹಾಗೂ ಅಧ್ಯಯನ ಅಗತ್ಯ. ಅದೇ ರೀತಿ ಕೃಷಿ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪರಿಸರವಾದಿ ಸುರೇಶ್‌ ಹೆಬ್ಳಿಕರ್‌ ಅಭಿಪ್ರಾಯಪಟ್ಟರು.

Advertisement

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮೇ 24ರಿಂದ 26ವರೆಗೆ ಹಮ್ಮಿಕೊಂಡಿರುವ ಮಾವು ಮತ್ತು ಹಲಸಿನ ಹಣ್ಣಿನ ತಳಿ ವೈವಿಧ್ಯತಾ ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಗೆ 6000 ವರ್ಷಗಳ ಇತಿಹಾಸವಿದ್ದು, ಇಡೀ ಭಾರತವೇ ಕೃಷಿ ವಲಯವನ್ನು ಅವಲಂಭಿಸಿದೆ. ಹಾಗಾಗಿ ನಿರಂತರ ಅಧ್ಯಯನದ ಹಾಗೂ ಸಂಶೋಧನೆಗಳ ಮೂಲಕ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಭಾರತವು ವೈವಿಧ್ಯತೆಯ ನಾಡಗಿದ್ದು, ಈ ವೈವಿಧ್ಯತೆಗೆ ಅನುಗುಣವಾಗಿ ಕೃಷಿ ಉತ್ಪನ್ನಗಳಲ್ಲಿ ವಿವಿಧತೆಯನ್ನು ಕಾಣುತ್ತೇವೆ. ಇದಕ್ಕೆ ಸೂಕ್ತ ಉದಾಹರಣೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಂಶೋಧಿಸಿರುವ ಮಾವಿನ ಹಣ್ಣಿನ 1700 ಹಾಗೂ ಹಲಸಿನ 80 ತಳಿಗಳು. ಇಂತಹ ವ್ಯತ್ಯಾಸವನ್ನು ಬೇರೆ ದೇಶಗಳಲ್ಲಿ ಕಾಣುವುದು ಅತಿ ವಿರಳ. ಇನ್ನು ಮಾವಿನ ಹಣ್ಣೊಂದರಲ್ಲೇ ಸಾವಿರಕ್ಕೂ ಹೆಚ್ಚು ವೈವಿಧ್ಯ ತಳಿಗಳನ್ನು ಸಂಶೋಧಿಸಿರುವುದು ನಿಜಕ್ಕೂ ಅಚ್ಚರಿಯ ವಿಷಯ ಎಂದರು.

ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಮಾತನಾಡಿ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಹಣ್ಣುಗಳ ವೈವಿಧ್ಯತೆಯಲ್ಲಿ ಭಾರತ ಮುಂಚುಣಿಯಲ್ಲಿದೆ. ಇಲ್ಲಿನ ಭೌಗೋಳಿಕ ವಿಭಿನ್ನತೆ ಇದಕ್ಕೆ ಮುಖ್ಯ ಕಾರಣ. ಈ ಅಂಶಗಳ ಆಧಾರದ ಮೇಲೆ ತೋಟಗಾರಿಕಾ ಸಂಸ್ಥೆಗಳು ಹೊಸ ರೀತಿಯ ತಳಿಗಳನ್ನು ಸಂಶೋಧಿಸಿ ರೈತರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.

ಆಧುನಿಕ ಜೀವನದ ಭರಾಟೆಯಲ್ಲಿ ವಿವಿಧ ರೋಗಗಳು ಜನರನ್ನು ಕಾಡುತ್ತಿದ್ದು, ವಿಶ್ವ ಅರೋಗ್ಯ ಸಂಸ್ಥೆಯ ವರದಿ ಪ್ರಕಾರ ಶೇ.40ರಷ್ಟು ಜನ ರೋಗದ ಚಿಕಿತ್ಸೆಗಾಗಿ ಹಣ ಖರ್ಚು ಮಾಡಿ ಬಡತನಕ್ಕೆ ಸಿಲುಕುತ್ತಿದ್ದಾರೆ. ಇದರ ಬದಲು ಆರೋಗ್ಯ ಕಾಪಾಡಿಕೊಳ್ಳಲು ನಿಸರ್ಗದ ಮೊರೆ ಹೋಗಬೇಕಿದೆ. ನಮ್ಮಲ್ಲಿ 700ಕ್ಕೂ ಹೆಚ್ಚು ಔಷಧೀಯ ಸಸಿ ಹಾಗೂ ಹಣ್ಣುಗಳಿದ್ದು, ಪ್ರತಿಯೊಬ್ಬರೂ ಅವುಗಳ ಸದುಪಯೋಗ ಪಡಿಸಿಕೊಂಡರೆ ರೋಗಮುಕ್ತ ಸಮಾಜ ಕಟ್ಟಬಹುದು ಎಂದು ಹೇಳಿದರು.

Advertisement

ಮೇಳದ ವಿಶೇಷತೆ: ಜನರಿಗೆ ಹಣ್ಣುಗಳ ಪೌಷ್ಟಿಕಾಂಶ ಹಾಗೂ ಮಹತ್ವ ಪರಿಚಯಿಸುವ ಉದ್ದೇಶದಿಂದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿರುವ ಮೇಳದಲ್ಲಿ 80ಕ್ಕೂ ಹೆಚ್ಚಿನ ಹಲಸು, 350ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮೇ 26ವರೆಗೆ ಮೇಳ ನಡೆಯಲಿದ್ದು, ಬೆಳಗ್ಗೆ 9.30ರಿಂದ ಸಂಜೆ 5ಗಂಟೆಯವರೆಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಾರುಕಟ್ಟೆಗಿಂತ ಅತೀ ಕಡಿಮೆ ಬೆಲೆಯಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿವಿಧ ತಳಿಗಳ ಕಸಿ ಗಿಡಗಳ ಮಾರಾಟ, ತಳಿಗಳಿಗಾಗಿ ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದರ ಜತೆಗೆ ವಿಜ್ಞಾನಿಳೊಂದಿಗೆ ಬೇಸಾಯ, ಕೋಯ್ಲೋತ್ತರ ತಂತ್ರಜಾnನ, ಮೌಲ್ಯವರ್ಧನೆ ಹಾಗೂ ತಳಿ ಅಭಿವೃದ್ಧಿ ಕುರಿತು ರೈತರು ಚರ್ಚಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next