ಬೆಂಗಳೂರು: ಕೃಷಿಕರ ಮನೋಭಾವ ಬದಲಾಗಿ ಸಮಗ್ರ ಕೃಷಿಯತ್ತ ಒಲವು ತೋರಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಚ್.ಶಿವಣ್ಣ ಅಭಿಪ್ರಾಯಪಟ್ಟರು.
ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಹೆಬ್ಟಾಳದ ಮಂಗಳ ಭವನದಲ್ಲಿ ಸೋಮವಾರ ಆಯೋಜಿಸಿದ್ದ “ರೈತಪರ ಕೃಷಿ ಲೇಖನಗಳು’ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ಕೃಷಿ ಸಂಶೋಧನಾ ಮಾಹಿತಿ ರೈತರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ರೈತ ಪರ ಕೃಷಿ ಲೇಖನಗಳು ಹೆಚ್ಚು ಪ್ರಕಟಗೊಳ್ಳಬೇಕಿದೆ.
ಮಾಧ್ಯಮಗಳು ಕೃಷಿಗೆ ಸಂಬಂಧಿಸಿದ ವರದಿ, ಲೇಖನ ಪ್ರಕಟಿಸಲು ಆದ್ಯತೆ ನೀಡಬೇಕಿದೆ. ಕೃಷಿ ಕಾರ್ಯಕ್ರಮಕ್ಕೆ ಟಿಆರ್‌ಪಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಾಧ್ಯಮಗಳು ನಿರ್ಲಕ್ಷ್ಯ ವಹಿಸುತ್ತಿವೆ. ಇದು ಬದಲಾಗಬೇಕು. ಇಡೀ ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆಯೂ ಮಾಹಿತಿ ಪೂರ್ಣ ಕಾರ್ಯಕ್ರಮ ಪ್ರಕಟಿಸಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಆರ್.ಎಸ್.ಈಶ್ವರ ದೈತೋಟ ಮಾತನಾಡಿ, ಬರವಣಿಗೆ ಓದುಗರ ಮಟ್ಟದಲ್ಲಿರಬೇಕು. ಭಾಷೆ ಭಾರವಾಗಬಾರದು, ಬರವಣಿಗೆಯಲ್ಲಿ ಬದ್ಧತೆ ಇರಬೇಕು. ಕೃಷಿ ಲೇಖನಗಳ ಕುರಿತು ತಜ್ಞರು ಬರೆಯುವ ಮೂಲಕ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು.
ಕೃಷಿ ಅಧ್ಯಯನ, ಸಂಶೋಧನೆ ಬಗ್ಗೆ ಲೇಖನಗಳನ್ನು ಪ್ರಕಟಿಸಲು ಕೃಷಿ ವಿವಿ ಆದ್ಯತೆ ನೀಡಬೇಕು. ಹಾಗೆಯೇ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೃಷಿ ಲೇಖನಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕ ಡಾ.ಜಿ.ಎಂ.ವರದರಾಜು ಮತ್ತು ಹಿರಿಯ ವಾರ್ತಾ ತಜ್ಞ ಡಾ.ಕೆ.ಶಿವರಾಮು ಮತ್ತಿತರರು ಉಪಸ್ಥಿತರಿದ್ದರು.