Advertisement

ಕೇವಲ ಮಾತಿಂದ ಕೃಷಿ ಆದಾಯ ಬರಲ್ಲ

11:13 AM Nov 20, 2017 | Team Udayavani |

ಬೆಂಗಳೂರು: ಕೇವಲ ಮಾತಿನಿಂದ ಕೃಷಿ ಆದಾಯ ದುಪ್ಪಟ್ಟಾಗಲು ಸಾಧ್ಯವಿಲ್ಲ. ಅದಕ್ಕೆ ಮಾರುಕಟ್ಟೆ, ಉತ್ಪಾದನೆ, ಸಂಸ್ಕರಣೆ, ವಿಸ್ತರಣೆ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ- 2017ರ 4ನೇ ದಿನದ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿಗೆ ರೈತರು ಹೂಡಿಕೆ ಮಾಡಿದ ಬಂಡವಾಳಕ್ಕಿಂತ ಶೇ.50 ರಷ್ಟು ಹೆಚ್ಚು ಲಾಭ ಬಂದಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರ ಇ-ಮಾರುಕಟ್ಟೆ ವ್ಯವಸ್ಥೆ ಜಾರಿಗೊಳಿಸಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಕೇಂದ್ರ ಸರ್ಕಾರವೂ ಕೂಡ ರಾಷ್ಟ್ರದಾದ್ಯಂತ ಇ- ಮಾರು 
ಕಟ್ಟೆ ವ್ಯವಸ್ಥೆ ಜಾರಿಗೆ ತರಲು ಹೆಚ್ಚಿನ ಗಮನ ಹರಿಸಬೇಕು ಎಂದರು. 

Advertisement

ಕೃಷಿಯಲ್ಲಿ ಬಿತ್ತನೆ, ಬೆಳೆಗಳ ಪೋಷಣೆ, ಕೊಯ್ಲು ಹಾಗೂ ಶೇಖರಣೆಗೆ ವಿವಿಧ ಹಂತಗಳಿದ್ದು, ರೈತ ನಿರಂತರವಾಗಿ ಕ್ರಿಯಾಶೀಲನಾಗಿ ಇರಬೇಕು. ಇಂದಿನ ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಕೃಷಿಯಲ್ಲಿಯೂ ಸಾಕಷ್ಟು ಸವಾಲುಗಳಿವೆ. ರೈತನ ಉತ್ಪಾದನೆಗೆ ಸೂಕ್ತ ಬೆಂಬಲ ಬೆಲೆಯಿಲ್ಲ ಎಂಬ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಸಹಕರಿಸಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ ಕಾರಣ ಕಳೆದ ಬಾರಿ 34ಲಕ್ಷ ಕ್ವಿಂಟಲ್‌ ತೊಗರಿಗೆ ಬೆಂಬಲ ಬೆಲೆ ನೀಡಿ ಖರೀದಿಸಲಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಮೊದಲು. ಹೀಗೆ ಹಲವು ಬೆಳೆಗಳಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಿದೆ. ಆದರೆ, ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಷರತ್ತು ಬದ್ಧ ಬೆಂಬಲ ಬೆಲೆ ನೀಡಲು ಮುಂದಾಗಿದ್ದು, ರೈತರ ಹಿತದೃಷ್ಟಿಯಿಂದ ತಪ್ಪು ನಿರ್ಧಾರ ಎಂದರು. 

“ಕೃಷಿ ಮೇಳಗಳ ಮೂಲಕ ರೈತರಿಗೆ ಕೃಷಿಗೆ ಸಂಬಂಧಿಸಿದ ಸೂಕ್ತ ಮಾಹಿತಿ ನೀಡುವ ಪ್ರಯತ್ನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪ್ರಾಮಾಣಿಕ ವಾಗಿ ಮಾಡಿದೆ. ಇದರಿಂದ ರೈತರಿಗೆ ಸ್ಫೂರ್ತಿ ಹಾಗೂ ಉಪಯೋಗ ದೊರೆಯು ವಂತಾಗಬೇಕು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ರಾಗಿ, ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಸೇರಿದಂತೆ ಎಲ್ಲಾ ಬೆಳೆಗಳ ಇಳುವರಿ ಉತ್ತಮವಾಗಿದೆ. ಕೃಷಿಕರಿಗೆ ಈ ಬಾರಿ ಹೆಚ್ಚಿನ ಲಾಭ ದೊರೆಯುತ್ತದೆಂಬ ಆಶಾವಾದ ಇದೆ ಎಂದ ಅವರು, ದೇಶದ ಬಹುತೇಕ ಯುವಜನತೆ ಕೃಷಿಯಿಂದ ವಿಮುಖ ರಾಗುತ್ತಿದ್ದು, ವಿಷಾದನೀಯ ಎಂದರು.

ರಾಜ್ಯ ಸರ್ಕಾರ ಒಣಬೇಸಾಯ ಮಾಡುತ್ತಿರುವ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 1.70 ಲಕ್ಷ ಕೃಷಿ ಹೊಂಡಗಳನ್ನು ತೋಡಿಸುವ ಮೂಲಕ ಕೃಷಿ ಕರ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರಿಂದ ಕೃಷಿಯಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಗ್ರ ಕೃಷಿ ಪದ್ಧತಿಯಂತಹ ಆಧುನಿಕ ಕೃಷಿ ವಿಧಾನವನ್ನು ರೈತರು ಅಳವಡಿಸಿ ಕೊಳ್ಳಬೇಕು. 

ಸಮಗ್ರ ಕೃಷಿ ಪದ್ಧತಿಯಿಂದ ಕೃಷಿಕ ಹೆಚ್ಚಿನ ಲಾಭ ಗಳಿಸಬಹುದಾಗಿದ್ದು, ಈ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಲು ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೃಷಿ ವಿಜಾnನಿಗಳು ಹಾಗೂ ಕೃಷಿ ವಿವಿಗಳು ಶ್ರಮಿಸಬೇಕೆಂದರು. ಕೃಷಿ ಸಚಿವ ಕೃಷ್ಣ ಬೈರೇಗೌಡ, ಬೆಲೆ ಕುಸಿತದ ವೇಳೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ರೈತರು ಸಂಕಷ್ಟಕ್ಕೊಳಗಾದರೆ, ಸರ್ಕಾರ ಮಾರು ಕಟ್ಟೆಯ ಮಧ್ಯೆ ಪ್ರವೇಶ ಮಾಡುವ ಮೂಲಕ ರೈತರ ಹಿತಕಾಪಾಡಲಿದೆ ಎಂದರು.

Advertisement

ಕಾರ್ಯ ಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್‌.ಶಿವಣ್ಣ, ಧಾರವಾಡ ಕೃಷಿ ವಿವಿ ಕುಲಪತಿ ಪಿ.ಬಿ.ಬಿರಾದಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ
ನವಿಲೆ ತಿಮ್ಮಾಪುರದ ರೈತ ಓಂಕಾರಮೂರ್ತಿ,ಅತ್ಯುತ್ತಮ ರೈತ ಮಳೆ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಚಿಕ್ಕತಮ್ಮನಹಳ್ಳಿಯ ಶಾರದಮ್ಮ ಪಡೆದರು.

ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನ ಹಳ್ಳಿ ತಾಲೂಕಿನ ಬೀಡಿಗಾನಹಳ್ಳಿ ಗ್ರಾಮದ ರೈತ ಮಂಜುನಾಥ್‌ ಅವರಿಗೆ ನೀಡಲಾಯಿತು. ಡಾ.ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯು ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಷಯ ತಜ್ಞ ಡಾ. ಬಿ.ಹನುಮಂತೇಗೌಡ ಹಾಗೂ “ಡಾ.ಎಚ್‌. ಎಂ.ಮರೀಗೌಡ ನ್ಯಾಷನಲ್‌ ಎಂಡೋಮೆಂಟ್‌’ ಪ್ರಶಸ್ತಿ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಎ.ಟಿ.ಸದಾಶಿವ ಅವರಿಗೆ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next