ಮೆಕ್ಯಾನಿಕ್‌ದಲ್ಲಿ ಎಂಜನಿಯರಿಂಗ್ ಪದವಿಗಳಿಸಿ, ಶಹರದಲ್ಲಿದ್ದು ಕೊಂಡು ಕೈತುಂಬಾ ಸಂಬಳ ಪಡೆಯಬಹುದಿತ್ತು. ಹೀಗೆ ಮಾಡಲಿಲ್ಲ. ಶಿಸ್ತಿನಿಂದ ಕೃಷಿ ಮಾಡುತ್ತಾ ಸೈ ಎನ್ನಿಸಿಕೊಂಡಿರುವವರು ವಿಜಯಪುರದ ಬಸವನಬಾಗೇವಾಡಿಯ ಸಂಗನಗೌಡ ಕಲ್ಲನಗೌಡ.
15 ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಮೂರು ವರ್ಷಗಳಿಂದ ಮೂರು ಎಕರೆಯಲ್ಲಿ ದ್ರಾಕ್ಷಿ ಬೆಳೆದು, ಒಣದ್ರಾಕ್ಷಿ ಮಾಡಿ ವರ್ಷಕ್ಕೆ 8ರಿಂದ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ದ್ರಾಕ್ಷಿ ಒಣಗಿಸಲು ಶೆಡ್ ನಿರ್ಮಿಸಿದ್ದಾರೆ. 140 ದಿನಗಳ ನಂತರ ಕಟಾವು ಮಾಡಿದ ದ್ರಾಕ್ಷಿಯನ್ನು 15 ದಿನಗಳ ಕಾಲ ಶೆಡ್‌ನಲ್ಲಿ ಹಾಕುತ್ತಾರೆ. ಹೀಗೆ ಹಾಕಿದ ಮೂರು, ಆರು ಹಾಗೂ ಒಂಭತ್ತನೆಯ ದಿನಕ್ಕೆ ಮತ್ತೇ ಔಷಧಗಳನ್ನು ಸಿಂಪಡಿಸುತ್ತಾರೆ. 15 ದಿನಗಳ ನಂತರ ಒಣ ದ್ರಾಕ್ಷಿಯನ್ನು ತೆಗೆದು ಗ್ರೇಡಿಂಗ್ ಮೆಶಿನ್‌ನಲ್ಲಿ ಹಾಕಿ ಸಣ್ಣ ಹಾಗೂ ದೊಡ್ಡ ಒಣ ದ್ರಾಕ್ಷಿಗಳನ್ನು ಬೇರ್ಪಡಿಸುತ್ತಾರೆ. 15 ಕೆ.ಜಿ ಗಳ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ತಾಸಗಾಂವ ಹಾಗೂ ವಿಜಯಪುರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ಎರಡು ವರ್ಷದ ಹಿಂದೆ ಒಣದ್ರಾಕ್ಷಿ ಇವರಿಗೆ 9 ಟನ್ ಬೆಳೆ ಬಂದಿತ್ತು. ಕೆ.ಜಿಗೆ 125 ರೂ ಬೆಲೆ ಸಸಿಕ್ಕಾಗ ಖರ್ಚು ತೆಗೆದು 8 ಲಕ್ಷರೂಗಳ ಲಾಭವಾಗಿತ್ತು. ಇದೇ ರೀತಿ ಕಳೆದ ವರ್ಷ ಸಂಗನಗೌಡರಿಗೆ 4 ಲಕ್ಷರೂಗಳ ಲಾಭವಾಗಿದೆ. ಈ ವರ್ಷ 9ರಿಂದ 10 ಟನ್ ಆಗುವ ನಿರೀಕ್ಷೆ ಇದೆ. ಕೆ.ಜಿಗೆ 140 ರೂ. ಸಿಕ್ಕರೆ ನಿವ್ವಳ 6 ಲಾಭವಾಗುತ್ತದೆ ಎನ್ನುತ್ತಾರೆ ಸಂಗನಗೌಡ ಚಿಕ್ಕೊಂಡ. ನಿತ್ಯ ಬೆಳಿಗ್ಗೆ 7ರಿಂದ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆಗಳ ಕಾಲ ಸಹೋದ್ಯೋಗಿ ಶಿವಾನಂದ ಸಂಕಗೊಂಡ ಅವರೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಷ್ಟೇ ಅಲ್ಲ, ಉಳಿದ 33 ಎಕರೆಯಲ್ಲಿ ಪಪ್ಪಾಯಿ, ಈರುಳ್ಳಿ, ಸಜ್ಜೆ, ಮೆಕ್ಕೆಜೋಳ, ತೊಗರಿ, ಎಳ್ಳು ಬೆಳೆಯುತ್ತಿದ್ದಾರೆ. ವರ್ಷದ ಆದಾಯ ಎಷ್ಟು ಹೇಳಿ? 30 ಲಕ್ಷ.
ಕಳೆದ ವರ್ಷ ಈರುಳ್ಳಿ ಇವರಿಗೆ 8 ಲಕ್ಷ ಆದಾಯ ಕೊಟ್ಟಿದ್ದನ್ನು ಮರೆಯುವಂತಿಲ್ಲ. ಹುಳಿಯಾದ ದ್ರಾಕ್ಷಿಯನ್ನು ಸಿಹಿ ಮಾಡಿಕೊಳ್ಳುವುದು ಹೀಗೆ.