Advertisement
ನಾನು ಮೂವತ್ತೆ„ದು ವರ್ಷಗಳ ಹಿಂದೆ ಕಲಿತ ಶಾಲೆ ಅಂದು ಇದ್ದಂತೆ ಈಗ ಇರಲಿಲ್ಲ. ನಾನು ಗೆಳತಿಯರ ಜತೆ ಸೇರಿ ಆಟವಾಡುತ್ತಿದ್ದ ಜಾರುಬಂಡಿ ಮಾಯವಾಗಿತ್ತು. ಶಾಲೆಯ ಹಿಂಭಾಗದಲ್ಲಿ ನಾನು, ಸಹ ವಿದ್ಯಾರ್ಥಿಗಳು ಗಿಡ ನೆಟ್ಟು ಬಾವಿಯಿಂದ ನೀರು ಸೇದಿ ಗಿಡಗಳಿಗೆ ಎರೆದು ಬೆಳೆಸಿದ ಕೈತೋಟ ಎಲ್ಲಿ ಹೋಯಿತೋ ! ಅಲ್ಲಿ ಹುಡುಕಿದರೂ ಒಂದು ಹೂವಿನ ಗಿಡ ಸಿಗಲಿಲ್ಲ. ಅಂದು ಅಲ್ಲಿ ನಂದಿಬಟ್ಟಲು ಗಿಡಗಳಿದ್ದವು. ಕರವೀರದ ಮರಗಳು ನಿತ್ಯ ಹೂವಿನಿಂದ ತುಂಬಿರುತ್ತಿದ್ದವು. ಈಗ ಅದರ ಬದಲು ಮುಳ್ಳುಕಂಟಿಗಳು. ಹಿಂದಿನ ವೈಭವಕ್ಕೆ ಸಾಕ್ಷಿಯೋ ಎಂಬಂತೆ ಬಾವಿಯೇನೊ ಇತ್ತು. ಆದರೆ, ನೀರು ಸೇದಲು ಹಗ್ಗ, ರಾಟೆ ಇರಲಿಲ್ಲ. ಬಹುಶಃ ಕುಡಿಯಲು ನಲ್ಲಿ ನೀರನ್ನು ಅವಲಂಬಿಸಿರಬಹುದು ಅಂದುಕೊಂಡೆ. ಶಾಲೆಯ ಮುಂದೆ, ಹಿಂದೆ ಜಾಗ ಬೇಕಾದಷ್ಟಿರುವಾಗ ಅದೂ ಹಳ್ಳಿಯಲ್ಲಿ ಪುಟ್ಟದಾದರೂ ಒಂದು ಕೈತೋಟ ಇಲ್ಲವಲ್ಲ ಎಂದು ನನಗೆ ಬಹಳ ಬೇಸರವಾಯಿತು. ಕೈತೋಟ ಮಾಡದೆ ಇರಲು ಕಾರಣವೇನು? ಎಂದು ಕೇಳ್ಳೋಣವೆಂದರೆ ಅಂದು ಆದಿತ್ಯವಾರ, ರಜಾ ದಿನ.
Related Articles
Advertisement
ಶಾಲಾ ಕಾಲೇಜುಗಳು, ವಿದ್ಯಾರ್ಥಿನಿಲಯಗಳ ಆವರಣ ಕೈತೋಟಕ್ಕೆ ಬಹು ಸೂಕ್ತ. ಬಿಸಿಯೂಟ ನಡೆಸುವ ಶಾಲೆಗಳು ಕಾಯಿಪಲ್ಲೆಗಳನ್ನು ಸ್ವತಃ ಬೆಳೆದುಕೊಳ್ಳಬಹುದು. ಅನಾನಸು, ಬಾಳೆ, ನೆಲ್ಲಿ, ಪಪ್ಪಾಯಿಯಂತಹ ಹೆಚ್ಚು ನಿಗಾ ಬೇಡದ, ಉತ್ಕೃಷ್ಟ ಗುಣಗಳನ್ನು ಹೊಂದಿರುವ ಹಣ್ಣುಗಳನ್ನೂ ಬೆಳೆಯಬಹುದು. ತುಳಸಿ, ಪಾರಿಜಾತ, ಲೋಳೆಸರಗಳಂಥ ಔಷಧಿ ಗಿಡಗಳನ್ನು ಬೆಳೆಸಿದರೆ ಮಕ್ಕಳಿಗೂ ಅವುಗಳ ಪರಿಚಯವಾಗುತ್ತದೆ. ಅಲ್ಲದೆ ಕೃಷಿಯಲ್ಲಿ ಅಭಿರುಚಿ ಮೂಡಿಸಿದಂತಾಗುತ್ತದೆ. ಕೈತೋಟದಲ್ಲಿ ಮಕ್ಕಳು ತಮಗೆ ಗೊತ್ತಿರುವ ಕೆಲಸವನ್ನು ಮಾಡಬಹುದು. ಗೊತ್ತಿಲ್ಲದ್ದನ್ನು ಕಲಿಯಬಹುದು. ಮಕ್ಕಳಲ್ಲಿ ಪ್ರಕೃತಿ, ಪರಿಸರ, ತೋಟಗಾರಿಕೆಯ ಬಗ್ಗೆ ಪ್ರೀತಿ ಮೂಡಿಸುವುದು, ಅದನ್ನು ಪೋಷಿಸುವ ಬಗ್ಗೆ ತಿಳುವಳಿಕೆ ಕೊಡುವುದೂ ಈ ಕೈತೋಟದ ಉದ್ದೇಶ. ನುರಿತ ಕೃಷಿ ಅಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡರೆ ಹೊಸ ಬಗೆಯ ಹಸಿರು ಕ್ರಾಂತಿ ಸಾಧ್ಯ.
ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದೆ. ಅದು ನವೆಂಬರ್ ತಿಂಗಳ ಕೊನೆ. ಅಲ್ಲಿವರೆಗೂ ಹಸಿರಿದ್ದ ಗಿಡಮರಗಳ ಎಲೆ ಎಲ್ಲವೂ ಈಗ ಬಣ್ಣಬಣ್ಣ. ಕೊನೆಗೆ ಎಲೆಗಳೆಲ್ಲ ಉದುರಿ ಭೂಮಿಗೆ ಕೆಂಪು, ಕಿತ್ತಳೆ, ಹಳದಿ ಬಣ್ಣದ ಹಾಸಿಗೆ. ಈ ಬಿದ್ದ ಎಲೆಗಳನ್ನು ಸಂಗ್ರಹಿಸಿ ಶಾಲೆಗೆ ತೆಗೆದುಕೊಂಡು ಬರಲು ಪ್ರೀಸ್ಕೂಲ್(ಅಂಗನವಾಡಿ) ಮಕ್ಕಳಿಗೆ ಅಧ್ಯಾಪಕಿಯಿಂದ ಸೂಚನೆ. ಹಾಗೆ ಮಕ್ಕಳು ಹೆಕ್ಕಿ ತಂದ ಎಲೆಗಳನ್ನು ಮುಂದಿಟ್ಟುಕೊಂಡು ಯಾಕೆ ಚಳಿಗಾಲದಲ್ಲಿ ಎಲೆಗಳು ಬಣ್ಣ ಬದಲಾಯಿಸಿ ಉದುರುತ್ತವೆ? ಎಂಬುದರ ಬಗ್ಗೆಯೇ ಆ ಒಂದು ಪಿರಿಯಡ್ ಮಕ್ಕಳಿಗೆ ಪಾಠ. ಮಾತ್ರವಲ್ಲ, ಉದುರುವ ಬಣ್ಣದ ಎಲೆ ಕುರಿತು ಪದ್ಯ-ನೃತ್ಯ. ಆ ಎಲೆಗಳನ್ನು ಕಾಗದದ ಹಾಳೆಗಳಿಗೆ ಅಂಟಿಸುವ ಆಟ. ನಾನೂ ಆ ತರಗತಿಯಲ್ಲಿ ಕುಳಿತಿದ್ದೆ. ಪ್ರಕೃತಿ ಪ್ರೇಮವನ್ನು ಅಲ್ಲಿ ಪುಟ್ಟ ಮಕ್ಕಳಿರುವಾಗಲೇ ಕಲಿಸಲಾಗುತ್ತದೆ.
ಕೆಲವು ವರ್ಷಗಳ ಹಿಂದಿನ ಮಾತು. ಮಳೆಗಾಲದಲ್ಲಿ ನಮ್ಮ ಕರಾವಳಿ, ಕೊಡಗಿನ ಬಹುತೇಕ ಗದ್ದೆಗಳು ಹಸಿರು ತುಂಬಿಕೊಂಡು ಕಂಗೊಳಿಸುತ್ತಿದ್ದವು. ಆದರೆ, ಇಂದು ಕಾಲ ಬದಲಾಗಿದೆ! ಭತ್ತದ ಗದ್ದೆಗಳಿದ್ದ ಜಾಗದಲ್ಲಿ ಅಡಿಕೆ, ರಬ್ಬರ್ ಮರಗಳು ತಲೆಯೆತ್ತಿವೆ. ನಗರದಲ್ಲಿ ಹುಟ್ಟಿ ಬೆಳೆದ ಈಗಿನ ಬಹುತೇಕ ಮಕ್ಕಳಿಗೆ ಭತ್ತದ ಪೈರು ಹೇಗೆ ಇರುತ್ತದೆ? ತೆನೆ ಹೇಗೆ ಕಟ್ಟುತ್ತದೆ? ಎಂಬುದೇ ಗೊತ್ತಿಲ್ಲ. ನಗರ ಮಾತ್ರ ಏಕೆ ಹಳ್ಳಿಯಲ್ಲೇ ಹುಟ್ಟಿ ಬೆಳೆದ ಮಕ್ಕಳ ಪಾರಂಪರಿಕ ಕೃಷಿ ಪಾಠದ ಕೊಂಡಿಯೂ ಕಳಚಿದೆ. ಇಂದು ಹಳ್ಳಿಯ ಮಕ್ಕಳೂ ಗದ್ದೆಗಿಳಿಯುವುದು ಕಡಿಮೆಯಾಗಿದೆ.
ಶಾಲೆಯ ಪಠ್ಯ ಚಟುವಟಿಕೆಗೆ ತೊಂದರೆಯಾಗದ ಹಾಗೆ ಶನಿವಾರ ಮಧ್ಯಾಹ್ನ ನಂತರ ವಿದ್ಯಾರ್ಥಿಗಳಿಗೆ ಕೃಷಿ ತರಬೇತಿ ನೀಡಬಹುದು. ಅದು ಕಷ್ಟ ಅನಿಸಿದರೆ ವಾರದಲ್ಲಿ ಒಂದು ಗಂಟೆ ಸಮಯವಾದರೂ ಕೈತೋಟ ರಚಿಸುವಲ್ಲಿ ತರಬೇತಿ ಇರಬೇಕು. ಬದಲಾದ ಜೀವನ ಕ್ರಮದಲ್ಲಿ ಪ್ರಚಲಿತವಾಗಿರುವ ತಾರಸಿ ಮೇಲಿನ ಕೃಷಿಯಿಂದ ಹಿಡಿದು ಸಾಂಪ್ರದಾಯಿಕ ಕೃಷಿ ತರಬೇತಿಯನ್ನೂ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಸಾವಯವ ಕೃಷಿ, ಸಾವಯವ ಗೊಬ್ಬರ ತಯಾರಿ, ಬೆಳೆಗಳ ರಕ್ಷಣೆಯ ಅರಿವನ್ನೂ ಮೂಡಿಸಬೇಕು. ಮಕ್ಕಳಿಗೆ ಕೃಷಿ ಪ್ರಬಂಧ ಸ್ಪ$ರ್ಧೆ- ರಸಪ್ರಶ್ನೆ ಸ್ಪ$ರ್ಧೆಯನ್ನು ಏರ್ಪಡಿಸಬೇಕು. ಕೃಷಿ ಪ್ರವಾಸ, ಗದ್ದೆ- ತೋಟದ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಾಕಿಕೊಂಡರೆ ವಿದ್ಯಾರ್ಥಿಗಳಿಗೆ ಕೃಷಿ ಕುರಿತು ಒಲವು ಮೂಡುತ್ತದೆ.
ಸಹನಾ ಕಾಂತಬೈಲು