ಮಾನ್ವಿ: ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೃಷಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ನೀಡಲಿದ್ದಾರೆ. ರೈತರು ಸಂಪ್ರದಾಯಿಕ ಕೃಷಿಯ ಜೊತೆಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ತಿಳಿಸಿದರು.
ತಾಲೂಕಿನ ರಾಜಲಬಂಡ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರವು ರೈತರಿಗೆ ಅವರ ಗ್ರಾಮದಲ್ಲಿಯೇ ಸಮಗ್ರವಾದ ಮಾಹಿತಿ ನೀಡುವ ಸಲುವಾಗಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹುಸೇನಸಾಹೆಬ್ ಮಾತನಾಡಿ, ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥವು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದ್ದು ಮಣ್ಣು ಶಕ್ತಿ ಯೋಜನೆ ಅಡಿಯಲ್ಲಿ ಮಣ್ಣಿನ ಆರೋಗ್ಯ ಪರೀಕ್ಷೆ, ರೈತರು ಬೆಳೆಯುವ ವಿವಿಧ ಬೆಳೆಗಳಿಗೆ ವಿಮೆ ಸೌಲಭ್ಯದ ಬಗ್ಗೆ ಮಾಹಿತಿ, ಮುಂಗಾರು ಹಂಗಾಮಿನಲ್ಲಿ ಬೆಳೆಯಬಹುದಾದ ಬೆಳೆಗಳ ಸಂಪೂರ್ಣ ಮಾಹಿತಿ, ಸಮಗ್ರ ಕೃಷಿ ಪದ್ಧತಿ, ಬೆಳೆ ಸಂರಕ್ಷಣೆ, ಬೀಜ ವಿತರಣೆಯ ಮಾಹಿತಿ, ಸಾವಯವ ಕೃಷಿ ಬಗ್ಗೆ ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ಕೃಷಿಗೆ ಸಂಬಂಧಿಸಿದ ಮಾಹಿತಿ ಕರ ಪತ್ರಗಳನ್ನು ಶಾಸಕರು ಬಿಡುಗಡೆಗೊಳಿಸಿದರು. ತಾಪಂ ಇಒ ಅಣ್ಣರಾವ್, ತಹಶೀಲ್ದಾರ್ ಚಂದ್ರಕಾಂತ್ ಎಲ್.ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ, ಶಿಶು ಅಭಿವೃದ್ಧಿ ಅಧಿಕಾರಿ ಸುಭದ್ರದೇವಿ, ತಾ.ಆರೋಗ್ಯಧಿಕಾರಿ ಡಾ| ಚಂದ್ರಶೇಖರಯ್ಯ ಸೇರಿದಂತೆ ಇತರರು ಇದ್ದರು.