ಮದ್ದೂರು: ರೈತರು ಕೃಷಿ ಮಾಹಿತಿ ಕೊರತೆ, ಸವಲುತ್ತು ಸಕಾಲದಲ್ಲಿ ತಲುಪದೆ, ಅಕಾಲಿಕ ಮಳೆ, ಬೆಳೆ ನಷ್ಟ ಸಂಭವಿಸಿ ಆತ್ಮಹತ್ಯೆಗಳಿಗೆ ಮುಂದಾಗುತ್ತಿರುವುದು ವಿಷಾದಕರ ಸಂಗತಿ ಎಂದು ಜಿಪಂ ಸದಸ್ಯ ಬೋರಯ್ಯ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ 2019-20ನೇ ಸಾಲಿನ ಸಮಗ್ರ ಕೃಷಿ ವಸ್ತು ಪ್ರದರ್ಶನ ಹಾಗೂ ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಇಲಾಖೆ ಸೇರಿದಂತೆ ರೇಷ್ಮೆ, ತೋಟಗಾರಿಕೆ ಇಲಾಖೆಗಳು ರೈತರಿಗೆ ಕೃಷಿ ಅಭಿಯಾನ ನಡೆಸುವ ಮೂಲಕ ಸೂಕ್ತ ಮಾಹಿತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಹಾಗೂ ಸರಿಯಾದ ಸಮಯಕ್ಕೆ ತಲುಪಿಸಲು ಮುಂದಾಗಬೇಕೆಂದರು.
ರಾಜ್ಯ ಸರ್ಕಾರ ರೈತರಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಈ ಕುರಿತು ಇಲಾಖೆಗಳು ಮಾಹಿತಿ ನೀಡುವ ಜತೆಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಕ್ರಮ ವಹಿಸಬೇ ಕೆಂದು ಸಲಹೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ್ ಮಾತನಾಡಿ, ರಾಜ್ಯ ಸರ್ಕಾರ ಸಮಗ್ರ ಕೃಷಿ ಅಭಿಯಾನ ಯೋಜನೆ ಜಾರಿಗೆ ತಂದಿದ್ದು ರೈತರು ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆದು ಆರ್ಥಿಕಾಭಿವೃದ್ಧಿ ಹೊಂದಬೇಕೆಂದು ಹೇಳಿದರು.
ವಸ್ತು ಪ್ರದರ್ಶನ: ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಆಗ್ರೋ ಕೇಂದ್ರಗಳಿಂದ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಜರುಗುವ ಜತೆಗೆ ತಾಲೂಕಿನ ರೈತರು ಬೆಳೆದ ವಿವಿಧ ಬಗೆಯ ಹಣ್ಣು, ತರಕಾರಿ, ಕೃಷಿ ವಸ್ತು ಪ್ರದರ್ಶನ ನಡೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ಸಿಗಬಹುದಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನಿ ಅತಿಫಾ ರೈತರಿಗೆ ಆಧುನಿಕ ಕೃಷಿ ವಿಧಿ ವಿಧಾನಗಳ ಕುರಿತಿ ವಿಚಾರ ಸಂಕಿರಣ ನಡೆಸಿಕೊಟ್ಟರು.
ಮೌನಾಚರಣೆ: ಉತ್ತರ ಕರ್ನಾಟಕ ಹಾಗೂ ಕೊಡಗಿನಲ್ಲಿ ಸಂಭವಿಸುತ್ತಿರುವ ನೆರೆ ಹಾವಳಿಯಿಂದ ಮೃತಪಟ್ಟವರು ಹಾಗೂ ಆತ್ಮಹತ್ಯೆಗೆ ಶರಣಾದ ರೈತರಿಗೆ ಐದು ನಿಮಿಷ ಮೌನಾಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಸದಸ್ಯ ಚಿಕ್ಕಮರಿಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಶಿವರಾಮ್, ಉಪಾಧ್ಯಕ್ಷ ಕೃಷ್ಣ ಅಧಿಕಾರಿಗಳಾದ ಮಂಜು, ರೂಪಶ್ರೀ, ವಿ.ಎಲ್. ಚಂದ್ರಶೇಖರ್, ಸಂಪತ್, ಗಿರೀಶ್‌ಗೌಡ ಮುಖಂಡರಾದ ನ.ಲಿ.ಕೃಷ್ಣ, ನಂದೀಶ್ ಹಾಜರಿದ್ದರು.