Advertisement

ಬಿಸಿಲ ನಾಡಲ್ಲಿ ಮಲೆನಾಡಿನ ಬೆಳೆಗಳು

04:11 PM Oct 07, 2022 | Team Udayavani |

ಕುಷ್ಟಗಿ: ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಅವರು, ಬಿಸಿಲ ನಾಡು ಕುಷ್ಟಗಿ ಈ ಭಾಗಕ್ಕೆ ಮಲೆನಾಡಿನ ಪ್ರಮುಖ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯಲು ಮುಂದಾಗಿದ್ದಾರೆ.

Advertisement

ಈ ಭಾಗ ಮೊದಲೇ ಬಿಸಿಲು ಹೆಚ್ಚು ಮಳೆ ಕಡಿಮೆ ಹೀಗಾಗಿ ಈ ಪ್ರದೇಶಕ್ಕೆ ಒಗ್ಗುವ ಬೆಳೆಗಳನ್ನು ಬೆಳೆಯುವುದು ಈ ಭಾಗದಲ್ಲಿ ಕಾಣಬಹುದು. ಮಲೆನಾಡಿನಲ್ಲಿ ಅಧಿಕ ಮಳೆ, ಕಾಡು ಹೆಚ್ಚು ಹೀಗಾಗಿ ಕಾಫಿ, ಏಲಕ್ಕಿ, ಲವಂಗ, ಅಡಿಕೆ, ಮೆಣಸು ಇತ್ಯಾದಿ ಬೆಳೆಗಳು ಸಹಜವಾಗಿ ಬೆಳೆಯುತ್ತಿವೆ. ಮಲೆನಾಡಿನ ಸೀಮಿತ ಬೆಳೆಗಳನ್ನು ಈ ಪ್ರದೇಶದಲ್ಲಿ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ವಜ್ರಬಂಡಿ ಕ್ರಾಸ್‌ನಲ್ಲಿರುವ ನಿಡಶೇಸಿ ಕೆರೆಯ ಹತ್ತಿರ ಬ್ಯಾಲಿಹಾಳ ಸೀಮಾದಲ್ಲಿ ದಾಳಿಂಬೆಗಾಗಿ 1985ರಲ್ಲಿ 30 ಎಕರೆ ಜಮೀನು ಖರೀ ದಿಸಿದ್ದರು. ಅಂತರ್ಜಲ ಆಧಾರಿತವಾಗಿ 2007ರವರೆಗೆ ಅಂತಾರಾಷ್ಟ್ರೀಯ ರಫ್ತು ಗುಣಮಟ್ಟದ ದಾಳಿಂಬೆಯಲ್ಲಿ ಉತ್ತಮ ಆದಾಯವಾಗಿತ್ತು.

ಆದರೆ 2009ರಲ್ಲಿ ವಿಪರೀತ ಅತಿವೃಷ್ಟಿ, ದುಂಡಾಣು ಅಂಗಮಾರಿ ರೋಗದ ವ್ಯಾಪಕ ಹಾವಳಿ ಹಿನ್ನೆಲೆಯಲ್ಲಿ ದಾಳಿಂಬೆ ಸಂಪೂರ್ಣ ನಷ್ಟವಾಯಿತು. ದಾಳಿಂಬೆ ಎಂದರೆ ಓಸಿ (ಮಟ್ಕಾ) ಕಂಪನಿಯಂತೆ ಎಂಬಂತಾಗಿತ್ತು. ನಂತರ ಸಮಗ್ರ ಕೃಷಿಯತ್ತ ಗಮನ ಕೇಂದ್ರೀಕರಿಸಿದ್ದರಿಂದ ಕಳೆದ 12 ವರ್ಷಗಳಲ್ಲಿ ಈ ಪ್ರದೇಶದ ಸಸ್ಯ ವೈವಿದ್ಯತೆಯಿಂದ ತೋಟದ ಚಿತ್ರಣ ಬದಲಾಗಿದೆ.

ಈಗಾಗಲೇ 8 ಸಾವಿರ ಶ್ರೀಗಂಧ, 6 ಸಾವಿರ ರಕ್ತ ಚಂದನ, 600 ಮಾವು, 500 ಚಿಕ್ಕು, 3 ಸಾವಿರ ತೇಗ, ನೇರಳೆ ಇತ್ಯಾ ದಿ ಬೆಳೆದು ಈ ಪ್ರದೇಶವನ್ನು ಅರಣ್ಯವಾಗಿ ಪರಿವರ್ತಿಸಿದ್ದಾರೆ. ಇದರಲ್ಲಿಯೇ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಲವಂಗ ಅಡಿಕೆ, ಮೆಣಸು, ಬಟರ್‌ ಫ್ರೂಟ್‌ (ಬೆಣ್ಣೆ ಹಣ್ಣು) ಪ್ರಾಯೋಗಿಕವಾಗಿ ಬೆಳೆಸಿದ್ದಾರೆ.

Advertisement

ಈ ಪ್ರದೇಶದಲ್ಲಿ ಎಲೆಬಳ್ಳಿ ಚನ್ನಾಗಿ ಬೆಳೆಯುತ್ತದೆ, ಮೆಣಸು ಯಾಕೆ ಬೆಳೆಯುವುದಿಲ್ಲ ಎಂದು 4 ಎಕೆರೆಯಲ್ಲಿ ಪ್ರತಿ ತೇಗದ ಗಿಡಕ್ಕೆ ಮೆಣಸು ಬಳ್ಳಿ ಹಬ್ಬಿಸಲಾಗಿದೆ. ಈ ಎಲ್ಲ ಬೆಳೆಗಳನ್ನು ಸಾವಯವ ಆಧಾರಿತವಾಗಿ ಶೂನ್ಯ ನಿರ್ವಹಣೆಯಲ್ಲಿ ಬೆಳೆಯಲಾಗಿದೆ.

ಈ ಬೆಳೆ ಅಲ್ಲದೇ ನುಗ್ಗೆ, ನೋನಿ, ಕರಿಬೇವು, ನೆಲ್ಲಿ, ಎಲೆಬಳ್ಳಿ, ರೇಷ್ಮೇ ಅಲ್ಲದೇ ಕೆಲವು ಔಷಧೀಯ ಬೆಳೆ ಬೆಳೆಯಲಾಗಿದೆ. ಈ ಬೆಳೆಗಳು ಆದಾಯ ತರುವ ಬೆಳೆಗಳಾಗಿದ್ದು, ಮಾಸಿಕವಾಗಿ ಎನಿಲ್ಲವೆಂದರೂ ಎಕರೆಗೆ 1 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ. ತೇಗ, ಶ್ರೀಗಂಧ, ರಕ್ತ ಚಂದನ ದೀರ್ಘಾವಧಿ ಬೆಳೆಗಳ ನಿಶ್ಚಿತ ಠೇವಣಿ ಇದ್ದಂತೆ. ಆಯಾ ಋತುವಿನಲ್ಲಿ ಉಳಿದ ಬೆಳೆಗಳಿಂದ ಆದಾಯ ನಿರೀಕ್ಷಿಸಬಹುದಾಗಿದ್ದು, ಕೃಷಿಯಿಂದ ವಿಮುಖರಾಗುವ ಈ ಸಂದರ್ಭದಲ್ಲಿ ಸಾವಯವ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಒಬ್ಬ ವ್ಯಕ್ತಿಯಿಂದ ನಿರ್ವಹಣೆ ಸಾಧ್ಯ ಎನ್ನುತ್ತಾರೆ ದೇವೇಂದ್ರಪ್ಪ ಬಳೂಟಗಿ.

ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ ಅವರ ತೋಟಕ್ಕೆ ಹೋಗಿದ್ದೆ. ಅವರ ತೋಟದ ಮಣ್ಣಿನಲ್ಲಿ ಯಾವ ಬೀಜ ಹಾಕಿದರೂ ಬೆಳೆಯುತ್ತದೆ. ಅಷ್ಟೊಂದು ಫಲವತ್ತತೆಯಿಂದ ಕೂಡಿದೆ. ಸಾವಯವ ಕೃಷಿ ಆಧಾರಿತ ಸಮಗ್ರ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚಲಿದ್ದು, ಭೂಮಿ ಶ್ರೀಮಂತವಾಗಲಿದೆ. –ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಶ್ರೀಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ಹೇರಿ ಕೊಲ್ಲಾಪುರ

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next