ಸಿಂಧನೂರು: ಈ ದೇಶದಲ್ಲಿ ರೈತರನ್ನು ದುರ್ಬಲಗೊಳಿಸುವ ಮೂರು ಕೃಷಿ ಕಾಯಿದೆಗಳು ಜಾರಿಯಾದ ಬಳಿಕ ಸರಕಾರದ ಆಹಾರ ನಿಗಮ ಸೇರಿದಂತೆ ಇತರೆಡೆ ಖರೀದಿ ನಿರ್ಬಂಧಿಸಲಾಗಿದೆ. ಇಂತಹ ಹೊತ್ತಿನಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೆಂದ್ರ ಕೇಳುತ್ತಿರುವ ನಮಗೆ ಕರಾಳ ಕಾಯಿದೆ ಅರಿವು ಇಲ್ಲವೆಂಬಂತಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ಕೃಷಿ ವಿರೋಧಿ ಕಾಯಿದೆ ಜಾರಿಗೆ ಬಂದಾಗ ಪಂಜಾಬ್, ಹರಿಯಾಣ, ಉತ್ತರಾಖಂಡ್ ಸೇರಿ ಇತರ ರಾಜ್ಯದ ರೈತರು ಜಾಗೃತವಾಗಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ಬೃಹತ್ ಹೋರಾಟ ದೆಹಲಿಯಲ್ಲಿ ಚಾಲ್ತಿಯಲ್ಲಿದೆ. ಆದರೆ, ಇದೀಗ ಪ್ರಧಾನ ಮಂತ್ರಿಗಳು ಬೆಂಬಲ ಬೆಲೆ ಘೋಷಣೆ ಹೆಸರಿನಲ್ಲಿ ರೈತರೊಂದಿಗೆ ಚೆಲ್ಲಾಟ ಆರಂಭಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಕಾಯಿದೆ ತಿದ್ದುಪಡಿ ಮಾಡಿದ ದಿನವೇ ಆಹಾರ ನಿಗಮ ಮುಚ್ಚಲಾಗಿದೆ. ಖರೀದಿಗೆ ಅವಕಾಶವೇ ಇಲ್ಲ. ರೈತರ ಉತ್ಪನ್ನಗಳನ್ನು ಮುಂದೆ ಸರಕಾರ ಖರೀದಿಸುವುದೇ ಇಲ್ಲ. ಈಗ ದೆಹಲಿಯಲ್ಲಿ ಹೋರಾಟ ಜೀವಂತ ಇರುವ ಹಿನ್ನೆಲೆಯಲ್ಲಿ ರೈತರನ್ನು ವಂಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಭತ್ತ ಖರೀದಿಗೆ ಬೆಂಬಲ ಬೆಲೆಯನ್ನು ಕೇಳುತ್ತಿರುವ ಸಂದರ್ಭದಲ್ಲಿ ಇಂದು ಜಾರಿಯಾಗಿರುವ ಕಾಯಿದೆಗಳ ಹಾನಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಗೋಧಿ, ಭತ್ತ ಸೇರಿ ಯಾವುದೇ ಉತ್ಪನ್ನ ಸರಕಾರದ ಏಜೆನ್ಸಿಗಳು ಖರೀದಿ ಮಾಡುವುದಿಲ್ಲ ಎಂಬುದು ಈಗಾಗಲೇ ಪಂಜಾಬ್, ಹರಿಯಾಣ, ಉತ್ತರಾಖಂಡ್, ಉತ್ತರ ಪ್ರದೇಶ, ಮಧ್ಯ ಪ್ರದೇಶಕ್ಕೆ ಅರ್ಥವಾಗಿದೆ. ಅಲ್ಲಿ ಕೃಷಿ ವಿರೋಧಿ ಕಾಯಿದೆಗಳಿಗೆ ಅನುಮತಿ ನೀಡಿಲ್ಲ. ಆದರೆ, ಕರ್ನಾಟಕದಲ್ಲಿ ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪನವರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಇದಕ್ಕೆ ಸಾಥ್ ನೀಡಿ, ಸೈ ಎಂದಿದ್ದಾರೆ.
ಇದನ್ನೂ ಓದಿ: ಅಸಂಘಟಿತ ಕಾರ್ಮಿಕರಿಗಾಗಿ ಇ-ಶ್ರಮ್ ಯೋಜನೆ
ಇದನ್ನು ರಾಜ್ಯದ ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಶಿವರಾಜ ಸಾಸಲಮರಿ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ಬಸವರಾಜ ಗೋಡಿಹಾಳ, ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್, ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚಿ, ಬಳ್ಳಾರಿ ಘಟಕದ ಜಿಲ್ಲಾಧ್ಯಕ್ಷ ಜಿ.ವಿ.ಗೌಡ, ಕೊಪ್ಪಳ ಜಿಲ್ಲಾಧ್ಯಕ್ಷ ನಜೀರ್‌ಸಾಬ ಮೂಲಿಮನಿ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಸಿ ನರಸಪ್ಪ ದೇವಸುಗೂರು, ತಿಮ್ಮಣ್ಣ ಭೋವಿ, ಮಹಾದೇವ ಏಗನೂರು, ರಾಜಾಸಾಬ್, ಜಿ.ರಾಮಬಾಬು, ಕೆ.ವೈ. ಬಸವರಾಜ ನಾಯಕ, ತಾಯಪ್ಪ, ಶಿವಪುತ್ರಗೌಡ ನಂದಿಹಾಳ, ರಂಗಪ್ಪ ನಾಯಕ ಸೇರಿದಂತೆ ಇತರರು ಇದ್ದರು.