ತಾಳಿಕೋಟೆ: ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಶನಿವಾರ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಮಾತನಾಡಿ, ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ರೈತರ ಸತತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಕೂಡಲೇ ಸಂಸದಿಯ ಪ್ರಕ್ರಿಯೆಗಳ ಮೂಲಕ ನಿರ್ಧಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದರು.
ರೈತ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ನಾಯ್ಕೋಡಿ ಮಾತನಾಡಿ, ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ಅಗ್ಗಾಗ್ಗೆ ರೈತರ ಬೆನ್ನು ಮೂಳೆ ಮುರಿಯಲು ಪ್ರಯತ್ನಿಸುತ್ತಿವೆ. ಆದರೆ ರೈತರು ಇಂದು ಪ್ರಜ್ಞಾವಂತರಾಗಿದ್ದು ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದಿದ್ದು ಸ್ವಾಗತಾರ್ಹ ಎಂದರು.
ರೈತರನ್ನು ವಿರೋಧ ಹಾಕಿಕೊಂಡು ಯಾವ ಸರ್ಕಾರಗಳು ಉತ್ತಮ ಆಡಳಿತ ನಡೆಸಲು ಸಾಧ್ಯವಿಲ್ಲ. ಈ ಸತ್ಯವನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ತಡವಾಗಿಯಾದರೂ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದು ಸಮಾಧಾನಕಾರ ಸಂಗತಿ ಎಂದರು.
ನಂದಾ ಹೆಗಡ್ಯಾಳ, ರೇಣುಕಾ ಸಂಕನಾಳ, ಶ್ರೀಶೈಲ ಹಿರೇಮಠ, ದ್ಯಾಮಣ್ಣ ವಡವಡಗಿ, ಗುರಪ್ಪ ನಾಟೀಕಾರ, ರತ್ನಪ್ಪ ಪೂಜಾರಿ, ಚಂದಪ್ಪ ಪೂಜಾರಿ, ಶಾಂತು ಪೂಜಾರಿ, ಮಾಳಪ್ಪ ಪೂಜಾರಿ, ಪರಶುರಾಮ ಮುದ್ದೂರ, ಮಲ್ಲಪ್ಪ ಪೂಜಾರಿ, ಮುತ್ತು ಪೂಜಾರಿ, ಗುರಣ್ಣ ಮಡಿವಾಳರ, ಯಲ್ಲನಗೌಡ ಬಿರಾದಾರ, ಮುತ್ತಯ್ಯ ಹಿರೇಮಠ ಇದ್ದರು.