ಬಾಗಲಕೋಟೆ: ರಾಜ್ಯದಲ್ಲಿ ತೋಟಗಾರಿಕೆ ಕೃಷಿಯಿಂದ 44,879 ಕೋಟಿ ಆದಾಯ ಬಂದಿದೆ. ತೋಟಗಾರಿಕೆ ಕೃಷಿ ಕೈಗೊಳ್ಳುವ ರೈತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲು ವಿಜ್ಞಾನಿಗಳು ಮುಂದಾಗಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ತೋಟಗಾರಿಕೆ ವಿವಿಯಲ್ಲಿ ಶನಿವಾರ ಆರಂಭಗೊಂಡ 3 ದಿನಗಳ 9ನೇ ತೋಟಗಾರಿಕೆ ಮೇಳಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿದರು.
ತೋಟಗಾರಿಕಾ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ತೋಟಗಾರಿಕೆ ಕ್ಷೇತ್ರದ ಸಾಧನೆಗೆ ರಾಜ್ಯ ಹೆಸರಾಗಿದೆ. 185.20 ಲಕ್ಷ ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನವಿದೆ. ಇದರಿಂದ 44,879 ಕೋಟಿ ರೂ.ಆದಾಯ ರಾಜ್ಯಕ್ಕೆ ಬಂದಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವು ತನ್ನ ಸ್ಥಾನ ಕಾಯ್ದುಕೊಂಡು ಹೆಚ್ಚಿನ ಸಾಧನೆ ಮಾಡಲು ಪೂರಕ ಸಂಶೋಧನೆ, ವಿಸ್ತರಣೆ ಹಾಗೂ ಇತರ ಮೂಲಸೌಕರ್ಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದರು.
ಪ್ರಧಾನಿಯವರು 100ನೇ ಕಿಸಾನ್ ರೈಲಿಗೆ ಚಾಲನೆ ನೀಡಿದ್ದಾರೆ. 3 ತಿಂಗಳ ಅವಧಿಯಲ್ಲಿ ಕಿಸಾನ್ ರೈಲುಗಳ ಮೂಲಕ 27 ಸಾವಿರ ಟನ್ ಕೃಷಿ ಉತ್ಪನ್ನ ಹಲವೆಡೆ ಸಾಗಿಸಲಾಗಿದೆ. ಕೊಳೆತು ಹೋಗಬಹುದಾದ ದಾಳಿಂಬೆ, ಕಿತ್ತಳೆ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಶೀಘ್ರ ಬೇರೆ ರಾಜ್ಯಗಳಿಗೆ ಸಾಗಿಸಲು ಕೃಷಿ ರೈಲ್ ಯೋಜನೆಯ ಸೌಲಭ್ಯ ಬಳಸಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಕಳೆದ3ತಿಂಗಳ ಅವಧಿಯಲ್ಲಿ ಕಿಸಾನ್ ರೈಲುಗಳ ಮೂಲಕ 27 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲಾಗಿದೆ ಎಂದರು.