Advertisement

ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬರಬೇಕು: ಸಿಎಂ ಬೊಮ್ಮಾಯಿ

09:43 PM Jan 20, 2023 | Team Udayavani |

ಬೆಂಗಳೂರು: ಅನ್ನದಾತ ರೈತನ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ಅದಕ್ಕೆ ನಿಶ್ಚಿತತೆ ತಂದು ಕೊಡುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳು ಕೃಷಿ ವಿವಿಗಳಿಂದ ಆಗಬೇಕು. ಅದಕ್ಕಾಗಿ ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬರಬೇಕು. ರೈತರ ಜಮೀನುಗಳನ್ನೇ ಕ್ಯಾಂಪಸ್‌ ಆಗಿ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

Advertisement

ಕೇಂದ್ರ ಸರಕಾರದ ಪ್ರಸ್ತಾವನೆಯಂತೆ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದ ಹಿನ್ನೆಲೆಯಲ್ಲಿ ಅದರ ಆಚರಣೆ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ “ಸಿರಿಧಾನ್ಯ ಮತ್ತು ಸಾವಯವ-ಅಂತಾರಾಷ್ಟ್ರೀಯ ವಾಣಿಜ್ಯ ಮೇಳ:2023’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹವಾಮಾನ ಮತ್ತು ವೈಜ್ಞಾನಿಕ ಕಾರಣಗಳಿಂದಾಗಿ ರೈತ ಇಂದು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಆದ್ದರಿಂದ ಕೃಷಿ ವಿವಿಗಳು ಹಳೆ ಕಾಲದ ಸಂಶೋಧನೆ, ಮಾದರಿ, ಪದ್ಧತಿಗಳನ್ನು ಬಿಟ್ಟು ಈಗಿನ ಅಗತ್ಯಕ್ಕೆ ತಕ್ಕಂತೆ ರೈತನ ಬದುಕಿಗೆ ನಿಶ್ಚಿತತೆ ತಂದು ಕೊಡುವ ಕೆಲಸ ಆಗಬೇಕು. ಅದಕ್ಕಾಗಿ ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬರಬೇಕು ಎಂದು ಕರೆ ನೀಡಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ, ಕೈಲಾಶ್‌ ಚೌಧರಿ, ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್‌, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯಪ್ರತಾಪ್‌ ಶಾಹಜಿ, ಕೃಷಿ ಉತ್ಪನ್ನ ರಾಜ್ಯ ಸಚಿವ ದಿನೇಶ್‌ ಪ್ರತಾಪ್‌ ಸಿಂಗ್‌ ಮತ್ತಿತರರು ಇದ್ದರು.

33 ಲಕ್ಷ ರೈತರಿಗೆ ಸಾಲ
ರಾಜ್ಯ ಸರಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ನೀಡಿದೆ. 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದ್ದು, ಇದೊಂದು ದಾಖಲೆ. ರೈತಶಕ್ತಿ ಯೋಜನೆ 10 ದಿನಗಳಲ್ಲಿ ಪ್ರಾರಂಭಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರು ಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. 10 ಎಚ್‌.ಪಿ. ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Advertisement

ಸಿರಿಧಾನ್ಯ ರಾಯಭಾರಿ
ನಾನು ಸಿರಿಧಾನ್ಯ ರಾಯಭಾರಿ ಎಂದು ಹೇಳಿದ ಸಿಎಂ ಬೊಮ್ಮಾಯಿ, ಕಳೆದ 30 ವರ್ಷಗಳಿಂದ ಅನ್ನ ಸೇವಿಸಿಲ್ಲ. ಸಿರಿಧಾನ್ಯಗಳಾದ ನವಣೆ ಇತ್ಯಾದಿಗಳನ್ನು ಸೇವಿಸುತ್ತಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next