ಕಟಪಾಡಿ: ಅಕಾಲಿಕ ಮಳೆಯ ಪರಿಣಾಮ ಪ್ರಾಪಂಚಿಕವಾಗಿ ಗುರುತಿಸಲ್ಪಟ್ಟ (ಜಿಐ) ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳ ಬೆಳೆಯು ಹಾನಿಗೀಡಾಗಿದ್ದು, ಕಂಗೆಟ್ಟ ಮಟ್ಟುಗುಳ್ಳ ಬೆಳೆಗಾರರ ಕೃಷಿ ಕ್ಷೇತ್ರಕ್ಕೆ ಬೆಂಗಳೂರಿನ ಕೃಷಿ ವಿಜ್ಞಾನಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿರುತ್ತಾರೆ
ಬೆಂಗಳೂರಿನ ಐಐಹೆಚ್ಆರ್ ಮಣ್ಣು ವಿಜ್ಞಾನಿ ಡಾ|ಡಿ. ಕಲೈವಣ್ಣನ್ ಉದಯವಾಣಿಗೆ ಪ್ರತಿಕ್ರಿಯಿಸಿದ್ದು, ಗದ್ದೆಯ ಮಟ್ಟಕ್ಕಿಂತ ಎತ್ತರ ಕಾಯ್ದುಕೊಂಡು ಬುಡ ಹಾಕಿ ಮಲ್ಚಿಂಗ್ ಶೀಟ್ ಅಳವಡಿಸಿ ಮಟ್ಟುಗುಳ್ಳ ಬೆಳೆ ಬೆಳೆಯುವುದರಿಂದ ಮಟ್ಟುಗುಳ್ಳದ ಗಿಡಗಳು ಉಳಿದಿವೆ. ಮಳೆ ಹೆಚ್ಚಳಗೊಂಡು ಬೇರು ಮತ್ತು ಕಾಂಡ, ಗೆಲ್ಲುಗಳು ಸೂಕ್ಷ್ಮ ಜೀವಿ ಮತ್ತು ಪಾಚಿಯಿಂದ ಬಾಧಿತವಾಗಿದೆ. ಸಾರಜನಕ, ರಂಜಕ ಸಹಿತ ಪೋಷಕಾಂಶಗಳ ಕೊರತೆಯಿಂದ ಮಣ್ಣಿನ ಫಲವತ್ತತೆ ಬಾಧಿತವಾಗಿದೆ.
ಸೂಕ್ಷ್ಮ ಪೋಷಕಾಂಶಗಳ ಕೊರತೆಯೂ ಆಗಿರುತ್ತದೆ. ಹಾಗಾಗಿ ಇಳುವರಿ ಕುಂಠಿತಗೊಂಡಿದೆ. ಮಟ್ಟುಗುಳ್ಳ ಬೆಳೆಯ ಗದ್ದೆಯಿಂದ ನೀರು ಇಂಗುವ ಅಥವಾ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದಲ್ಲಿ ಗಿಡಗಳು ಮತ್ತಷ್ಟು ಬಲಿಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವೆಜಿಟೇಬಲ್ ಮಿಕ್ಸರ್ ಎಕರೆಗೆ 4 ಕಿಲೋ, ಅರ್ಕಾ ಮೈಕ್ರೋಬಿಯಲ್ ಮಿಕ್ಸರ್ ಎಕರೆಗೆ 4 ಕಿಲೋ, ಲೀಟರ್ ನೀರಿಗೆ 2 ಗ್ರಾಂ. ಕಾರ್ಬನ್ ಡೈಜೀಮ್ ಸೇರಿಸಿ ಗಿಡಗಳ ಬುಡಕ್ಕೆ ಹಾಕಿದಲ್ಲಿ ಮಟ್ಟುಗುಳ್ಳದ ಗಿಡಗಳು ಪೋಷಕಾಂಶಯುಕ್ತವಾಗಲಿದೆ ಎಂಬ ವಿಶ್ವಾಸವನ್ನು ಮಣ್ಣು ವಿಜ್ಞಾನಿಗಳು, ತೋಟಗಾರಿಕಾ ಅಧಿಕಾರಿಗಳು ವ್ಯಕ್ತ ಪಡಿಸಿದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಎಲ್. ಹೇಮಂತ್ ಕುಮಾರ್, ಸಹಾಯಕ ತೋಟಗಾರಿಕಾ ಅಧಿ ಕಾರಿ ಅಮಿತ್ ಸಿಂಪಿ, ಕೋಟೆ ಗ್ರಾಮದ ಗ್ರಾಮ ಕರಣಿಕ ಲೋಕನಾಥ್ ಲಮ್ಹಾಣಿ, ಗ್ರಾಮ ಸಹಾಯಕ ಕೃಷ್ಣ, ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮಟ್ಟುಗುಳ್ಳ ಬೆಳೆಗಾರರಲ್ಲಿ ಆತ್ಮ ವಿಶ್ವಾಸ ತುಂಬಿರುತ್ತಾರೆ. ಇದೇ ಸಂದರ್ಭ ಭತ್ತದ ಕೃಷಿ ಕ್ಷೇತ್ರಗಳನ್ನೂ ಪರಿಶೀಲನೆ ನಡೆಸಿರುತ್ತಾರೆ