ಅಜೆಕಾರು: ಯರ್ಲಪಾಡಿ ಗ್ರಾಮ ಪಂಚಾಯತ್ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯು ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಲಾಕ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ ಸರಕಾರದ ಸಬ್ಸಿಡಿ ಆಧಾರದಲ್ಲಿ ಕೃಷಿ ಸಲಕರಣೆ ಮತ್ತು ಯಂತ್ರೋಪಕರಣ ಯೋಜನೆಗೆ ಪಂಚಾಯತ್‌ನಿಂದ ಶಿಫಾರಸು ಮಾಡಿದ ಮೇಲೆ ಅಂತಿಮವಾಗಿ ಆಯ್ಕೆಗೊಂಡ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಪಂಚಾಯತ್ ಆಡಳಿತಕ್ಕೆ ನೀಡುವಂತೆ ಪಂಚಾಯತ್ ಅಧ್ಯಕ್ಷ ವಸಂತ ಕುಲಾಲ್ ಸೂಚಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿಯವರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದರು. ಬೆಳೆ ಸಮೀಕ್ಷೆ ಮಾಡುವಾಗ ರೈತರು ಸೂಕ್ತ ಮಾಹಿತಿ ನೀಡಿದಲ್ಲಿ ಬೆಳೆ ವಿಮೆ ಹಾಗೂ ಸರಕಾರದ ಇತರ ಸವಲತ್ತು ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಪಂಚಾಯತ್ ವ್ಯಾಪ್ತಿಯಲ್ಲಿ ಇಂಡಸ್ ಟವರ್ ನಿರ್ಮಾಣವಾಗಿದ್ದು ಪಂ.ಗೆ ಯಾವುದೇ ತೆರಿಗೆ ಪಾವತಿ ಆಗಿಲ್ಲ. ಈ ನಿಟ್ಟಿನಲ್ಲಿ ಮೆಸ್ಕಾಂಗೆ ನೀಡಿರುವ ನೀರಾಪೇಕ್ಷಣೆಯನ್ನು ಪಂಚಾಯತ್ ಸಾಮಾನ್ಯ ಸಭೆ ರದ್ದುಗೊಳಿಸಿ ಸಂಪರ್ಕ ಕಡಿತಗೊಳಿಸಲು ನಿರ್ಣಯ ಕೈಗೊಂಡಿದೆ. ಈ ಬಗ್ಗೆ ಮೆಸ್ಕಾಂಗೂ ತಿಳಿಸಲಾಗಿದೆ ಆದರೆ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಮೆಸ್ಕಾಂ ಅಧಿಕಾರಿಯವರನ್ನು ಪ್ರಶ್ನಿಸಲಾಯಿತು.
ಈ ಬಗ್ಗೆ ಮಾತನಾಡಿದ ಮೆಸ್ಕಾಂ ಅಧಿಕಾರಿ ಟವರ್‌ಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಕಡಿತಗೊಳಿಸಲು ಜಿಲ್ಲಾಧಿಕಾರಿಯವರ ಅನುಮತಿ ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಕಂದಾಯ, ಗ್ರಂಥಾಲಯ, ಶಿಕ್ಷಣ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದರು. ಪಿಡಿಒ ಪ್ರಮೀಳಾ ನಾಯಕ್ ಸದಸ್ಯ ಕಾರ್ಯದರ್ಶಿಯಾಗಿದ್ದರು. ಕಾರ್ಯದರ್ಶಿ ಸುನಂದಾ ಎಸ್. ಸ್ವಾಗತಿಸಿ ವಂದಿಸಿದರು. ಸಿಬಂದಿ
ಸಹಕರಿಸಿದರು.