Advertisement
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದ ಶ್ರೀಅಡವಿಸಿದ್ಧೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ ಗುರುಪಾದ ಮಹಾಸ್ವಾಮಿಗಳು ಸದಾ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಠಕ್ಕೆ ಬರುವ ಭಕ್ತರಿಗೆ ಅಧ್ಯಾತ್ಮಿಕ ಮಾರ್ಗದರ್ಶನದೊಂದಿಗೆ ಕೃಷಿ ಜ್ಞಾನವನ್ನು ನೀಡುತ್ತಿದ್ದಾರೆ. ಶ್ರೀಮಠದ 5 ಎಕರೆ ಭೂಮಿಯಲ್ಲಿ ಕಳೆದ 5 ವರ್ಷಗಳಿಂದ ಸಂಪೂರ್ಣ ಸಾವಯವ ಕೃಷಿಯನ್ನು ಕೈಗೊಳ್ಳುವುದರೊಂದಿಗೆ ಹೊಸ- ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಎಲ್ಲ ಕೃಷಿ ಸಾಧನೆಗಳನ್ನು ಪರಿಶೀಲಿಸಿದ ಕೃಷಿ ಇಲಾಖೆಯು, ಅವರಿಗೆ ಈ ಸಾಲಿನ “ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ.
ಕಬ್ಬು, ಬಾಳೆ, ಶೇಂಗಾ. ಜೋಳ, ಗೋದಿ, ಕಡಲೆ, ಸದಕ ಹಾಗೂ ಸಿರಿಧಾನ್ಯಗಳನ್ನು ಬೆಳೆಯುತ್ತಿರುವ ಶ್ರೀಗಳು ಆಕಳುಗಳ ಗಂಜಲ ಹಾಗೂ ಸೆಗಣಿಯನ್ನೇ ಮೂಲಗೊಬ್ಬರವಾಗಿ ಬಳಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಅಲ್ಲದೆ, ನೀರಿನ ಮಿತಬಳಕೆ ಮತ್ತು ಕೃಷಿತ್ಯಾಜ್ಯಗಳ ಮರುಬಳಕೆಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಲಾಭ ಲೆಕ್ಕಾಚಾರ
ಅರ್ಧ ಎಕರೆ ಜಮೀನಿನಲ್ಲಿ ನಾಟಿ ಮಾಡಿದ ಕಬ್ಬು ಬೆಳೆಯಿಂದ 31 ಟನ್ ಇಳುವರಿ ದೊರೆತಿತ್ತು. ಬಂದ ಆದಾಯ 83,700 ರೂ. ಕಬ್ಬು ಬೆಳೆಯೊಂದಿಗೆ ಕಾಯಿಪಲ್ಲೆಗಳನ್ನು ನಾಟಿ ಮಾಡಿದ್ದರಿಂದ 5000 ರೂ. ದೊರೆತಿತ್ತು. 2 ಎಕರೆ ಜಮೀನಿನಲ್ಲಿ ಬೆಳೆದ ಸಾವಯವ ಗೋಧಿ ಮತ್ತು ಜವೆಗೋಧಿ (ಸದಕ)ಯಿಂದ 40,000 ರೂ. ಆದಾಯ ಬರುವ ನಿರೀಕ್ಷೆ ಇದೆ. ಬೆಳೆಗಳಿಗೆ ನಾಟಿ ಮಾಡುವಾಗ ಎರಡು ದಿನ ಮತ್ತು ಕೊಯ್ಲು ಮಾಡುವಾಗ ಎರಡು ದಿನ ಒಟ್ಟಾರೆ ನಾಲ್ಕು ಕೂಲಿಗಳ ಅವಶ್ಯಕತೆ ಬೀಳುತ್ತದೆ. ಅವರ ಸಂಬಳವನ್ನು ಹೊರತುಪಡಿಸಿದರೆ ಇನ್ನಿತರ ಯಾವುದೇ ಖರ್ಚು ಇರುವುದಿಲ್ಲ. ಶ್ರೀಗಳು ಜಮೀನಿನಲ್ಲಿ ಅರಣ್ಯ ಕೃಷಿ ಬೆಳೆಗಳಾದ ಶ್ರೀಗಂಧ, ಸಾಗುವಾನಿ ಮತ್ತು ಹೆಬ್ಬೇವು ಗಿಡಗಳನ್ನು ನಾಟಿ ಮಾಡಿದ್ದಾರೆ. ತೋಟಗಾರಿಕೆ ಬೆಳೆಗಳಾದ ಅಂಜೂರ, ದಾಳಿಂಬೆ ಮತ್ತು ಉಳ್ಳಾಗಡ್ಡಿ ಶ್ರೀಗಳ ತೋಟದಲ್ಲಿ ಹುಲುಸಾಗಿ ಬೆಳೆದಿವೆ.
Related Articles
Advertisement