Advertisement

ಸೊರಗುತ್ತಿದೆ ಕೃಷಿ ಉತ್ಪನ್ನ ಮಾರುಕಟ್ಟೆ!

05:36 PM Mar 05, 2021 | Team Udayavani |

ಚಿತ್ರದುರ್ಗ: ಕೃಷಿ ಉತ್ಪನ್ನಗಳ ಮಾರಾಟದಿಂದ ಬರುವ ಸೆಸ್‌ ನಂಬಿ ನಡೆಯುತ್ತಿದ್ದ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳು ಸರ್ಕಾರ ಸೆಸ್‌ ಕಡಿಮೆ ಮಾಡಿರುವುದರಿಂದ ಸೊರಗುತ್ತಿವೆ. 1.50 ರೂ. ಇದ್ದ ಸೆಸ್‌ ಪ್ರಮಾಣವನ್ನು ಸರ್ಕಾರ ಏಕಾಏಕಿ 35 ಪೈಸೆಗೆ ಇಳಿಸಿದ್ದರಿಂದ ಎಪಿಎಂಸಿ ನಿರ್ವಹಣೆಗೆ ಕೇವಲ 14 ಪೈಸೆ ನಿಗ ದಿ ಮಾಡಲಾಗಿತ್ತು. ಇದರಿಂದ ವಿದ್ಯುತ್‌  ಬಿಲ್‌ ಪಾವತಿಸುವುದು ಕಷ್ಟವಾಗಿತ್ತು. ಆನಂತ ಸರ್ಕಾರ ಇದನ್ನು 2020 ಡಿಸೆಂಬರ್‌ 15ರಂದು ಮತ್ತೆ 1 ರೂ.ಗೆ ಹೆಚ್ಚಳ ಮಾಡಿತು.

Advertisement

ಈ ವೇಳೆ ವರ್ತಕರು ಪಾವತಿಸಲು ಹಿಂದೇಟು ಹಾಕಿದರು. ಇದರಿಂದ 2021 ಜನವರಿ 2ರಿಂದ 60 ಪೈಸೆಗೆ ಇಳಿಕೆ ಮಾಡಿದೆ. ಇದರಿಂದ ಮತ್ತೆ ಎಪಿಎಂಸಿಗಳು ನಿರ್ವಹಣೆಗೆ ಪರದಾಡುತ್ತಿವೆ. ಎಪಿಎಂಸಿ ನಿರ್ವಹಣೆಗೆ 45 ಪೈಸೆ ಮಾತ್ರ: ನೂತನ ಸೆಸ್‌ ನೀತಿಯ ಪ್ರಕಾರ 60 ಪೈಸೆಯಲ್ಲಿ ಎಪಿಎಂಸಿಗೆ 45 ಪೈಸೆ ಮಾತ್ರ ಸಂದಾಯವಾಗುತ್ತಿದೆ. 10 ಪೈಸೆ ಎಂಎಸ್‌ಪಿಗೆ, 5 ಪೈಸೆ ಮಾರುಕಟ್ಟೆ ಮಂಡಳಿಗೆ, 1 ಪೈಸೆ ಇ ಟೆಂಡರ್‌ಗೆ ಸಂದಾಯವಾಗುತ್ತಿದೆ. ಈ ಹಿಂದೆ ಎಪಿಎಂಸಿ ಸೆಸ್‌ನಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು, ವೇತನ ಇತ್ಯಾದಿ ಪಾವತಿಸಿ, ಉಳಿದ ಹಣವನ್ನು ಸರ್ಕಾರಕ್ಕೆ ಪಾವತಿಸಲಾಗುತ್ತಿತ್ತು. ಆದರೆ, ಈಗ ಸಿಬ್ಬಂದಿ ವೇತನ ಮತ್ತಿತರೆ ಬಾಬ್ತುಗಳನ್ನು ಈಗ ಸರ್ಕಾರವೇ ಭರಿಸಬೇಕಾಗಿದೆ.

ಶೇ.50ರಷ್ಟು ಉದ್ಯೋಗ ಕಡಿತ: ಸೆಸ್‌ ಕಡಿಮೆ ಮಾಡಿದ್ದರಿಂದ ಎಪಿಎಂಸಿ ಆವರಣದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಶೇ.50ಕ್ಕೆ ಇಳಿಸಲಾಗಿದೆ. ಇಲ್ಲಿನ ಎಪಿಎಂಸಿಯಲ್ಲಿದ್ದ 32 ಸೆಕ್ಯೂರಿಟಿ ಗಾಡ್‌ ìಗಳಲ್ಲಿ 16 ಜನರನ್ನು ಮನೆಗೆ ಕಳಿಸಲಾಗಿದೆ. 8 ಜನ ಡಾಟಾ ಎಂಟ್ರಿ ಆಪರೇಟರ್‌ಗಳಲ್ಲಿ ಇಬ್ಬರನ್ನು ಕೆಲಸದಿಂದ ತೆಗೆಯಲಾಗಿದೆ. ಸ್ವತ್ಛತೆಗಾಗಿ 2.25 ಲಕ್ಷ ರೂ. ಅನುದಾನ ಮೀಸಲಿಡಲಾಗುತ್ತಿತ್ತು. ಈಗ ಅದನ್ನು ಶೇ.25ರಷ್ಟನ್ನು ಕಡಿಮೆ ಮಾಡಿ, 1.60 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ.

2010ರಲ್ಲಿ ಚಿತ್ರದುರ್ಗ ಎಪಿಎಂಸಿಯಿಂದ 14 ಕೋಟಿ ರೂ. ಸಾಲ ಮಾಡಲಾಗಿತ್ತು. ಇದರಲ್ಲಿ 4.10 ಕೋಟಿ ರೂ. ಇನ್ನೂ ಬಾಕಿ ಇದೆ. ಈಗವಸೂಲಾಗುತ್ತಿರುವ ಸೆಸ್‌ನಿಂದ ಸಾಲ ತೀರಿಸುವುದು ಕಷ್ಟದ ಮಾತು. ಕೇವಲ ಬಡ್ಡಿ ಪಾವತಿಸಿಕೊಂಡು ಹೋಗುತ್ತಿದ್ದೇವೆ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ್‌ ಮಾಹಿತಿ ನೀಡಿದರು. ಚಿತ್ರದುರ್ಗ ಎಪಿಎಂಸಿ 86 ಎಕರೆ ವಿಸ್ತೀರ್ಣ ಹೊಂದಿದೆ. 337 ಮಳಿಗೆಗಳಿವೆ. ಭೀಮಸಮುದ್ರದಲ್ಲಿ 13 ಎಕರೆ ಹಾಗೂ ಭರಮಸಾಗರದಲ್ಲಿ 9 ಎಕರೆ ವಿಸ್ತೀರ್ಣದ ಉಪ ಮಾರುಕಟ್ಟೆಗಳು ಇದರ ವ್ಯಾಪ್ತಿಯಲ್ಲಿವೆ. ಭೀಮಸಮುದ್ರ ಎಪಿಎಂಸಿಯಲ್ಲಿ 15 ವರ್ತಕರಿದ್ದಾರೆ. ಇಲ್ಲಿ ನಡೆಯುವ ವಹಿವಾಟಿನಿಂದ ಮಾಸಿಕ 30 ಲಕ್ಷ ರೂ. ಸೆಸ್‌ ಸಂಗ್ರಹವಾಗುತ್ತಿತ್ತು. ಎಪಿಎಂಸಿ ಹೊರಗೂ ವಹಿವಾಟು ನಡೆಸಲು ಅವಕಾಶ ಸಿಕ್ಕಿದ್ದರಿಂದ ಅನೇಕರು ಆವರಣ ತೊರೆದಿದ್ದಾರೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next