ಸಿದ್ದಾಪುರ: ನಿಷೇಧದ ಆದೇಶದ ನಡುವೆಯೂ ಸಿದ್ದಾಪುರದ ಸಂತೆ ನಡೆಯಿತು. ಪ್ರತಿ ಬುಧವಾರ ವಾರದ ಸಂತೆ ನಡೆಯುತ್ತಿದ್ದು, ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಗ್ರಾಹಕರು ವಿರಳವಾಗಿದ್ದು ವ್ಯಾಪಾರ ವಹಿವಾಟಿಗೂ ಬಿಸಿ ತಟ್ಟಿದೆ.
ಮೀನು ಮಾರುಕಟ್ಟೆಯಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಜನರು ಕಂಡುಬಂದರು. ಹೊರ ಜಿಲ್ಲೆಯಿಂದ ವ್ಯಾಪಾರಿಗಳು ವಾಹನಗಳ ಮೂಲಕ ವಸ್ತುಗಳನ್ನು ತರುತ್ತೇವೆ. ಆದರೆ ಈ ವ್ಯಾಪಾರವಿಲ್ಲದೆ ವಾಹನ ಬಾಡಿಗೆ ಹಣ ಕೊಡಲೂ ಕಷ್ಟವಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.
ತರಕಾರಿ ಬೆಲೆ ತುಸು ಕಡಿಮೆ ಇದ್ದರೂ, ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಪ ಸ್ವಲ್ಪ ಇರುವ ಗ್ರಾಹಕರು ಕೂಡಾ ಜನಸಂದಣಿ ಕಡಿಮೆ ಇರುವ ಕಡೆ ವ್ಯಾಪಾರ ಮಾಡಿಕೊಂಡು ಕೂಡಲೇ ಸ್ಥಳದಿಂದ ನಿರ್ಗಮಿಸುತ್ತಿದ್ದರು. ಇನ್ನೂ ಕೆಲವು ಗ್ರಾಹಕರು ಮಾರುಕಟ್ಟೆ ಸ್ವತ್ಛತೆ ಇಲ್ಲದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.
ಅಧಿಕೃತ ಆದೇಶದ ಮೇರೆಗೆ ಸಂತೆ ರದ್ದು
ಬುಧವಾರ ಮಧ್ಯಾಹ್ನದ ತನಕ ಸಂತೆ ರದ್ದು ಮಾಡುವ ಬಗ್ಗೆ ಯಾವುದೇ ಅಧಿಕೃತ ಆದೇಶ ಇರಲಿಲ್ಲ. ಆದೇಶ ಬಂದ ಮೇಲೆ ಸಂತೆ ರದ್ದುಗೊಳಿಸುವಂತೆ ಸೂಚಿಸಿದ್ದೇವೆ.
-ರವೀಂದ್ರ ರಾವ್, ಅಭಿವೃದ್ಧಿ ಆಧಿಕಾರಿ ಗ್ರಾಮ ಪಂಚಾಯತ್ ಸಿದ್ದಾಪುರ