ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಲು ಭೂ ಪರಿವರ್ತನ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದ್ದು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಹೊಸ ಪದ್ಧತಿಯಲ್ಲಿ 60 ದಿನಗಳಲ್ಲಿ ಭೂ ಪರಿವರ್ತನ ಅರ್ಜಿ ವಿಲೇವಾರಿಯಾಗಲಿದ್ದು 120 ದಿನ ಆದರೂ ಇತ್ಯರ್ಥವಾಗದಿದ್ದರೆ ಇತ್ಯರ್ಥವಾಗಿದೆ ಎಂದು ಭಾವಿಸಿಕೊಳ್ಳಬಹುದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರ್ಜಿದಾರರು Landrecords.karnataka.gov.in ಭೇಟಿ ನೀಡಿ ತಮ್ಮ ಯೂಸರ್ ಐಡಿ ಸೃಜಿಸುವ ಮೂಲಕ ಮೊದಲಿಗೆ ಅಫಿಡವಿಟ್ ಜನರೇಷನ್ ಲಿಂಕ್ ಮೂಲಕ ಅಗತ್ಯ ಮಾಹಿತಿ ತುಂಬಿ ಸಿಸ್ಟಮ್ ಜನರೇಟಡ್ ಅಫಿಡವಿಟ್ ಪಡೆದು ಅದನ್ನು 200 ರೂ. ಛಾಪಾ ಕಾಗದದಲ್ಲಿ ಮುದ್ರಿಸಿ ನೋಟರಿಯವರಿಂದ ದೃಢೀಕರಿಸಿ ಮತ್ತೆ ಜಾಲತಾಣದಲ್ಲಿ ಅಫಿಡವಿಟ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವ ದೇಶಪಾಂಡೆ ವಿವರಿಸಿದರು.
ದಿನಾಂಕ ವಿಸ್ತರಣೆ
ರಾಜ್ಯದ ಗ್ರಾಮಾಂತರ ಮತ್ತು ನಗರ ಪ್ರದೇಶದ ಸರಕಾರಿ ಜಮೀನುಗಳಲ್ಲಿ 2015 ಜನವರಿ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆ ಸಕ್ರಮಗೊಳಿಸಲು 2019ರ ಮಾ. 31 ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.
ಅರ್ಜಿ ಸಲ್ಲಿಸಲು 2018ರ ಸೆ. 16 ರವರೆಗೆ ನೀಡಿದ್ದ ಗಡುವು ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿ ಮೇರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದರು. ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವವರ ಜಮೀನು ಸಕ್ರಮಗೊಳಿಸಲು ಮತ್ತು ಅರ್ಜಿ ಸಲ್ಲಿಸಲು 2009ರ ಮಾ. 16ರವರೆಗೆ ಕಾಲಾವಕಾಶ ನೀಡಲಾಗಿದೆ. ಅದೇ ರೀತಿ ಬಗರ್ ಹುಕುಂ ಅಡಿ ನಮೂನೆ 50 ಮತ್ತು 53ರಲ್ಲಿ ಸ್ವೀಕೃತವಾದ ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇರುವುದರಿಂದ 2020ರ ಎ. 26ರವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಹೊಸ ತಾಲೂಕುಗಳು ಶೀಘ್ರ ಕಾರ್ಯಾರಂಭ
ರಾಜ್ಯದಲ್ಲಿ ರಚನೆಯಾಗಿರುವ ಹೊಸ ತಾಲೂಕುಗಳು ಶೀಘ್ರ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಕಂದಾಯ ಇಲಾಖೆ ತನ್ನ ಕಾರ್ಯ ಮಾಡುತ್ತಿದೆ. ಉಳಿದ ಇಲಾಖೆಗಳು ಕಾರ್ಯ ಆರಂಭಿಸ ಬೇಕಿದೆ. ಅದಕ್ಕಾಗಿ ಸಿಬಂದಿ ನೇಮಕ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದರು. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ನಡೆಯುತ್ತಿದ್ದು ಕಂದಾಯ ಇಲಾಖೆಯಿಂದ ಕೆಲವು ಮಾಹಿತಿ ನೀಡಲಾಗಿದೆ. ಕೆಲವೆಡೆ ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನಿನ ಬಗ್ಗೆ ತಕರಾರು ಇದ್ದು ಅದನ್ನು ಸರಿಪಡಿಸಲಾಗುವುದು ಎಂದರು.